ಸುದ್ದಿ ಕನ್ನಡ ವಾರ್ತೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಸೇರಿಸುವುದನ್ನು ವಿರೋಧಿಸಿ, ಜಿಲ್ಲೆಯನ್ನು ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಸಬೇಕು ಎಂದು ಆಗ್ರಹಿಸಿ ಆ.13ರಂದು ಕಾರವಾರದಲ್ಲಿ ಬೃಹತ್ ಪಾದಯಾತ್ರೆ ನಡೆಯಲಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು ಮಿತ್ರಸಮಾಜದಿಂದ ಆರಂಭವಾಗುವ ಪಾದಯಾತ್ರೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ ವಕೀಲರು, ಧಾರವಾಡ ಪೀಠ ವ್ಯಾಪ್ತಿಯ ಎಂಟು ಜಿಲ್ಲೆಗಳ ವಕೀಲರ ಸಂಘಗಳ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಮಂಗಳೂರು ಪೀಠಕ್ಕೆ ಜಿಲ್ಲೆಯನ್ನು ಸೇರಿಸಿದರೆ ಕಕ್ಷಿದಾರರಿಗೆ ಪ್ರಯಾಣದ ದೂರ, ಸಮಯ, ಆರ್ಥಿಕ ಹೊರೆ ಹೆಚ್ಚಾಗಿ ‘ಮನೆ ಬಾಗಿಲಿಗೆ ನ್ಯಾಯ’ ಉದ್ದೇಶಕ್ಕೆ ಧಕ್ಕೆಯಾಗಲಿದೆ. ಆಡಳಿತಾತ್ಮಕ ಹಾಗೂ ಭಾಷಾ ಸಮಸ್ಯೆಯೂ ಎದುರಾಗಬಹುದು. ಈಗಾಗಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಕರಾವಳಿ ಹೈಕೋರ್ಟ್ ಪೀಠ ಅಗತ್ಯವಿದ್ದರೆ 10,227 ಚದರ ಕಿ.ಮೀ. ವಿಸ್ತೀರ್ಣದ ಉತ್ತರ ಕನ್ನಡವೇ ಸೂಕ್ತ. ಐತಿಹಾಸಿಕವಾಗಿ 1857ರಲ್ಲಿ ಕೆನರಾ ಜಿಲ್ಲೆ ವಿಭಜನೆಯಾದಾಗ ಹೊನ್ನಾವರ ಜಿಲ್ಲಾ ಕೇಂದ್ರವಾಗಿದ್ದರಿಂದ ಕರಾವಳಿ ಪೀಠಕ್ಕೆ ಹೊನ್ನಾವರ ಸೂಕ್ತ ಸ್ಥಳ ಎಂದು ಸಲಹೆ ನೀಡಿದರು.ಸಂಘದ ಪದಾಧಿಕಾರಿಗಳಾದ ನಾಗರಾಜ ದೇಶಭಂಡಾರಿ, ಪದ್ಮಾ ತಾಂಡೇಲ್ ದೀಪಾ, ಸಂಜಯ ಸಾಳುಂಕೆ, ಚರಣ್ ನಾಯ್ಕ ಸೇರಿದಂತೆ ಹಲವರು ಇದ್ದರು.
