ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಜೋರಾದ ಗಾಳಿ-ಮಳೆಯ ಪರಿಣಾಮ ಪಟ್ಟಣದ ಹಳಿಯಾಳ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಶನಿವಾರ ರಾತ್ರಿ ಮರವೊಂದು ರಸ್ತೆಯಲ್ಲಿ ಬಿದ್ದು ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
ಮರ ವಿದ್ಯುತ್ ಕಂಬದ ಮೇಲೆ ಬಿದ್ದು ವಿದ್ಯುತ್ ಕಂಬ ಹಾಗೂ ತಂತಿಗಳಿಗೂ ಹಾನಿ ಉಂಟಾಯಿತು. ರಸ್ತೆಯ ಮಧ್ಯದಲ್ಲೇ ಮರ ಬಿದ್ದಿರುವುದರಿಂದ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆ, ಹೆಸ್ಕಾಂ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮರ ತೆರವುಗೊಳಿಸಲು ಕ್ರಮ ಕೈಗೊಂಡರು. ಮಧ್ಯರಾತ್ರಿ ವೇಳೆಗೆ ವಾಹನಗಳ ಸಂಚಾರ ಪುನಃ ಆರಂಭಗೊಂಡಿತು.
ತಾಲೂಕಿನ ಆನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಹುಟಕಮನೆ ಗ್ರಾಮದಲ್ಲಿ ಶನಿವಾರ ರಾತ್ರಿ ಮನೆಯ ಮೇಲೆ ಮರವೊಂದು ಬಿದ್ದು ಹಾನಿ ಉಂಟಾಗಿದೆ. ಹುಟಕಮನೆ ಗ್ರಾಮದ ಕಣ್ಣುಪಾಲಿನ ಬೂದಿಕೊಂಬೆಯಲ್ಲಿ ಗಣಪಾ ರಾಮಾ ಸಿದ್ದಿ ಮನೆಯ ಮೇಲೆ ಮರ ಬಿದ್ದಿದೆ. ಇದರಿಂದ ಮನೆಯ ಮೇಲ್ಛಾವಣಿಯ ಹಂಚು, ಪಕಾಸುಗಳು ಮುರಿದು ಭಾಗಶಃ ಹಾನಿಯಾಗಿದೆ. ಸಿದ್ದಾಪುರ ತಾಲೂಕಿನ ಕಾಳೇನಳ್ಳಿ ಸಮೀಪದ ಶಿರಸಿ-ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ಭಾನುವಾರ ಭಾರಿ ಗಾಳಿ-ಮಳೆಗೆ ಬೃಹತ್ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆಯೇ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಕಾರಿಗೂ ಹಾಗೂ ಕಾರಿನಲ್ಲಿದ್ದ ಪ್ರಯಾಣಿಕರೆಲ್ಲರೂ ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
