ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಕಾರವಾರ-ಜೋಯಿಡಾ ರಸ್ತೆಯ ಚಾಪೋಲಿ ಸಮೀಪ ಸಂಭವಿಸಿದ್ದ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಸ್ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಚಿಕ್ಕೋಡಿ ಸಾರಿಗೆ ಘಟಕದ ಚಾಲಕ ರಾಜು ಭೋಜೆ ಎಂದು ಗುರುತಿಸಲಾಗಿದೆ. ಅವರು ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ನಸುಕಿನ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ಜೋಯಿಡಾ ತಾಲೂಕಿನ ಚಾಪೋಲಿ ಸಮೀಪ ಉಳವಿ-ಇಚಲಕರಂಜಿ ಹಾಗೂ ಬೆಳಗಾವಿಯಿಂದ ಕಾರವಾರಕ್ಕೆ ಸಂಚರಿಸುತ್ತಿದ್ದ ಎರಡು ಸಾರಿಗೆ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಅಪಘಾತದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡಿದ್ದರು.
ಅಪಘಾತದ ತೀವ್ರತೆಗೆ ಉಳವಿ-ಇಚಲಕರಂಜಿ ಮಾರ್ಗದ ಬಸ್ ಚಾಲಕ ರಾಜು ಭೋಜೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ಚಾಪೋಲಿ ಬಳಿ ಸಂಭವಿಸಿದ ಈ ಅಪಘಾತವು ಸಾರಿಗೆ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಶೋಕದ ವಾತಾವರಣ ನಿರ್ಮಿಸಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
