ಸುದ್ದಿ ಕನ್ನಡ ವಾರ್ತೆ
ಹೊನ್ನಾವರ: ತಾಲೂಕಿನ ಕಾಸರಕೋಡದ ಟೊಂಕ ಕಡಲತೀರದಲ್ಲಿ ಅರಣ್ಯ ಇಲಾಖೆಯ ಮಹತ್ವದ ಕಾರ್ಯ ನಡೆಯಿತು.
ಅರಣ್ಯ ಇಲಾಖೆಯ ಅಧಿಕಾರಿಗಳು ಸಂರಕ್ಷಣೆ ಮಾಡಿದ್ದ ಆಮೆ ಮೊಟ್ಟೆ ಗೂಡಿನಿಂದ ಹೊರಬಂದ ಆಮೆ ಮರಿಗಳನ್ನು ಸೋಮವಾರ ಸುರಕ್ಷಿತವಾಗಿ ಸಮುದ್ರಕ್ಕೆ ಬಿಡಲಾಯಿತು.
ಆಲೀವ್ ರಿಡ್ಲೆ ಪ್ರಬೇಧದ ಕಡಲಾಮೆ ಈ ಕಡಲತೀರದಲ್ಲಿ ಒಟ್ಟು 113 ಮೊಟ್ಟೆ ಇಟ್ಟಿತ್ತು.
ಈ ಮೊಟ್ಟೆಗಳನ್ನು ಇತರ ಪ್ರಾಣಿ ಹಾಗೂ ಪಕ್ಷಿಗಳಿಂದ ರಕ್ಷಿಸಲು ಅರಣ್ಯ ಇಲಾಖೆಯವರು ವಿಶೇಷ ಕಾಳಜಿ ವಹಿಸಿದ್ದರು. ಇದೀಗ ಗೂಡಿನಿಂದ 112 ಆಮೆ ಮರಿಗಳು ಹೊರಬಂದಿದ್ದು, ಅವುಗಳನ್ನು ಯಶಸ್ವಿಯಾಗಿ ಸಮುದ್ರಕ್ಕೆ ಬಿಡಲಾಗಿದೆ.
ಈ ಕಾರ್ಯದಲ್ಲಿ ಅರಣ್ಯ ಇಲಾಖೆ ನಿಯೋಜಿಸಿದ್ದ ಉದಯ ತಾಂಡೇಲ ಮತ್ತು ಗುರು ಮಾದೇವ ತಾಂಡೇಲ ಅವರೊಂದಿಗೆ ಸ್ಥಳೀಯರಾದ ವಿಠಲ ತಾಂಡೇಲ, ಗಣಪತಿ ತಾಂಡೇಲ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ರೀತಿಯ ಸಂರಕ್ಷಣಾ ಕಾರ್ಯಗಳು ಕಡಲಾಮೆಗಳ ಉಳಿವಿಗೆ ಮಹತ್ವದ್ದಾಗಿದ್ದು, ಸ್ಥಳೀಯರ ಸಹಕಾರ ಶ್ಲಾಘನೀಯವಾಗಿದೆ.
