ಸುದ್ದಿ ಕನ್ನಡ ವಾರ್ತೆ
ಶಿರಸಿ :ತಾಲೂಕಿನ ಮುಂಡಿಗೇಸರದ ಎಂ.ವಿ.ಶ್ರೇಯಾ ಅವರಿಗೆ ರಾಜ್ಯಮಟ್ಟದ ರಂಗಭೂಮಿ ರತ್ನ ಸಿರಿ ಪ್ರಶಸ್ತಿ’ ಲಭಿಸಿದೆ.

ವಿಜಯಪುರ ಜಿಲ್ಲೆ ತಾಳಿಕೋಟೆಯ ಶ್ರೀ ವಿರಕೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ (ರಿ) 7ನೇ ವಾರ್ಷಿಕೋತ್ಸವದ ಅಂಗವಾಗಿ ಈ ಪ್ರಶಸ್ತಿ ನೀಡುತ್ತಿದೆ. ಬಹುಮುಖ ಪ್ರತಿಭೆಯ ಸಾಧಕಿ ಎಂ.ವಿ.ಶ್ರೇಯಾ ಅವರು ಶಿಕ್ಷಣದ ಜೊತೆಗೆ ಏಕಪಾತ್ರಭಿನಯ, ನಾಟಕ, ಯಕ್ಷಗಾನ, ಭರತನಾಟ್ಯ ಮುಂತಾದ ಕ್ಷೇತ್ರದಲ್ಲಿನ ಅಭಿನಯ ಪರಿಗಣಿಸಿ ಸಂಸ್ಥೆಯು ಪ್ರಶಸ್ತಿ ನೀಡುತ್ತಿದೆ. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆಯುತ್ತಿರುವ ಶ್ರೇಯಾ ಮುಂಡಿಗೇಸರದ ವಿಶ್ವೇಶ್ವರ ಹೆಗಡೆ ಹಾಗೂ ಶಶಿಕಲಾ ಎಸ್. ಶಿಕ್ಷಕ ದಂಪತಿಯ ಪುತ್ರಿಯಾಗಿದ್ದಾರೆ.

ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಜೂನ್ 7ರಂದು ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಕ್ರಮವು ತಾಳಿಕೋಟೆಯ ಖಾಲ್ಗತೇಶ್ವರ ಸಭಾಭವನದಲ್ಲಿ ನಡೆಯಲಿದೆ. ಸಂಸ್ಥೆಯು ಹಮ್ಮಿಕೊಂಡಿದ್ದ 2 ತಿಂಗಳ ಉಚಿತ ನೃತ್ಯ ತರಬೇತಿಯ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ನಾಟ್ಯ ವೈಭವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಕನ್ನಡ ನಾಡಿನ ನೆಲ ಜಲ ಭಾಷೆ ಸಾಹಿತ್ಯ, ಸಂಗೀತ, ನೃತ್ಯ, ಶಿಕ್ಷಣ, ಮಾಧ್ಯಮ, ಚಿತ್ರಕಲೆ, ಸಮಾಜ ಸೇವೆ, ರಂಗಭೂಮಿ, ಕ್ರೀಡೆ, ವೈದ್ಯಕೀಯ, ಜನಪದ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.