ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯಲ್ಲಿ ಶಾಲಾ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ, ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ನ ಅಡಿಯಲ್ಲಿ ಜೂನ್ 5 ರಂದು ‘ವಿಶ್ವ ಪರಿಸರ ದಿನಾಚರಣೆ’ಯನ್ನು ಅತ್ಯಂತ ಸಡಗರ ಮತ್ತು ಜವಾಬ್ದಾರಿಯಿಂದ ಆಚರಿಸಲಾಯಿತು.
ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಪ್ರಕೃತಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಕಾರ್ಯಕ್ರಮವು ಬೆಳಿಗ್ಗೆ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡರವರು ಹಾಗೂ ಸಹ ಶಿಕ್ಷಕರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕರಾದ ಅನಿಲ ರಾಠೋಡರವರು ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಪರಿಸರ ಮಾಲಿನ್ಯ ತಡೆಗಟ್ಟಲು ಮತ್ತು ಪ್ರಕೃತಿಯ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು 1974ರಲ್ಲಿ ಈ ದಿನವನ್ನು ಜಾರಿಗೆ ತಂದಿತು. ಹೆಚ್ಚುತ್ತಿರುವ ಮಾಲಿನ್ಯ, ಅರಣ್ಯನಾಶ ಮತ್ತು ತಾಪಮಾನ ಏರಿಕೆಗೆ ಕಡಿವಾಣ ಹಾಕಲು ಇದು ಎಲ್ಲರಿಗೂ ಪ್ರೇರಣೆಯಾಗಿದೆ.
ನಮ್ಮ ಸುತ್ತಲಿರುವ ಗಾಳಿ, ನೀರು, ಮಣ್ಣು, ಸಸ್ಯ ಮತ್ತು ಪ್ರಾಣಿ ಸಂಕುಲಗಳೇ ನಮ್ಮ ಪರಿಸರ. ಮಾನವನ ಅಸ್ತಿತ್ವಕ್ಕೆ ಮತ್ತು ಆರೋಗ್ಯಕರ ಬದುಕಿಗೆ ಪರಿಸರವೇ ಮೂಲಾಧಾರ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನೀಕರಣ ಮತ್ತು ಮಾನವನ ದುರಾಸೆಯಿಂದ ಪರಿಸರವು ತೀವ್ರ ಹಾನಿಗೊಳಗಾಗುತ್ತಿದೆ. ಇದನ್ನು ತಡೆಗಟ್ಟಿ, ಮುಂದಿನ ಪೀಳಿಗೆಗೆ ಸುರಕ್ಷಿತ ಭೂಮಿಯನ್ನು ನೀಡುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.”ಉಳಿದರೆ ಪರಿಸರ, ಉಳಿದರೆ ಜೀವ” ಎಂಬುದು ಕೇವಲ ಮಾತಾಗಿ ಉಳಿಯಬಾರದು. ಪ್ರಕೃತಿಯ ನಾಶವೇ ಮಾನವನ ವಿನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯನ್ನು ತಮ್ಮ ಧರ್ಮವೆಂದು ಭಾವಿಸಿ ಕಾರ್ಯನಿರ್ವಹಿಸಬೇಕು. ಗಿಡಗಳನ್ನು ನೆಡುವುದು ಮತ್ತು ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಪ್ರಸ್ತುತ ಪರಿಸ್ಥಿತಿಯಲ್ಲಿ ಮರಗಳನ್ನು ಬೆಳೆಸುವುದು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕಿವಿಮಾತು ಹೇಳಿದರು.
ಶಾಲೆಯ ಸಹ ಶಿಕ್ಷಕರಾದ ಆನಂದ ಪಿ ಹಾಗೂ ವಿದ್ಯಾ ಮೇಡಂರವರು ಕಾರ್ಯಕ್ರಮದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.ಕೊನೆಯಲ್ಲಿ ಎಲ್ಲರಿಗೆ ವಂದನೆಯನ್ನು ಸಲ್ಲಿಸಲಾಯಿತು.
ಈ ವಿಶೇಷ ದಿನದ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು.
