Banner Ad

ಸುದ್ದಿ ಕನ್ನಡ ವಾರ್ತೆ
ಅಂಕೋಲಾ:ತಾಲೂಕಿನ ಹಾರವಾಡ ಗ್ರಾಮ ಪಂಚಾಯತಿ ಸಮೀಪ ಸೋಮವಾರ ಸಂಜೆ ಸಾರಿಗೆ ಬಸ್ಸೊಂದೊರ ಬ್ರೇಕ್ ಫೇಲ್ ಆದ ಪರಿಣಾಮ ನಿಲ್ಲಿಸಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಸಾರಿಗೆ ಬಸ್‌ಗಳ ಕಳಪೆ ನಿರ್ವಹಣೆಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸಂಜೆ ಸುಮಾರು 6 ಗಂಟೆಯ ಸುಮಾರಿಗೆ ಚಾಲಕ ಬಸ್ಸನ್ನು ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಹಠಾತ್ ಬ್ರೇಕ್ ಫೇಲ್ ಆಗಿದೆ. ನಿಯಂತ್ರಣ ತಪ್ಪಿದ ಬಸ್ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಜಖಂಗೊಂಡಿದ್ದು, ಸಮೀಪದ ಗೋಡೆಗೂ ಹಾನಿಯಾಗಿದೆ. ಜನದಟ್ಟಣೆ ಇರುವ ಪ್ರದೇಶದಲ್ಲೇ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸ್ಥಳೀಯರ ಮಾಹಿತಿಯ ಪ್ರಕಾರ, ಇದೇ ಪ್ರದೇಶದಲ್ಲಿ ಸಾರಿಗೆ ಬಸ್‌ಗಳ ತಾಂತ್ರಿಕ ದೋಷದಿಂದ ಸಂಭವಿಸುತ್ತಿರುವ ನಾಲ್ಕನೇ ಅಪಘಾತ ಇದಾಗಿದೆ. ಡಿಪೋ ಮಟ್ಟದಲ್ಲಿ ಬಸ್‌ಗಳ ಸರಿಯಾದ ನಿರ್ವಹಣೆ ಮತ್ತು ತಾಂತ್ರಿಕ ತಪಾಸಣೆ ನಡೆಯುತ್ತಿಲ್ಲ.

Banner Ad

ಹಳೆಯ ಮತ್ತು ದೋಷಪೂರಿತ ಬಸ್‌ಗಳನ್ನು ರಸ್ತೆಗೆ ಇಳಿಸುವ ಮೂಲಕ ಪ್ರಯಾಣಿಕರ ಹಾಗೂ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರತಿ ಬಾರಿ ಇದೇ ರೀತಿಯ ತಾಂತ್ರಿಕ ಸಮಸ್ಯೆಗಳಿಂದ ಅಪಘಾತಗಳು ಮರುಕಳಿಸುತ್ತಿವೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಬಸ್‌ಗಳ ಸುಸ್ಥಿತಿಯ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳು ತಕ್ಷಣವೇ ಹಳೆಯ ಬಸ್‌ಗಳ ತಪಾಸಣೆ ನಡೆಸಿ, ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಮಾತ್ರ ಸಂಚಾರಕ್ಕೆ ಬಳಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Banner Ad