Banner Ad

ಸುದ್ದಿ ಕನ್ನಡ ವಾರ್ತೆ

ಕಾರವಾರ:ತಾಲೂಕಿನ ಸಂಕ್ರುಭಾಗ ಘಟ್ಟದ ಬಳಿ ರಾಷ್ಟ್ರೀಯ ಹೆದ್ದಾರಿಯ 66 ರಲ್ಲಿ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಕಂಟೇನ‌ರ್ ಲಾರಿಯೊಂದು ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಅದೇ ಕಾರಿನ ಮೇಲೆ ಮಗುಚಿಬಿದ್ದ ಪರಿಣಾಮ ಓರ್ವ 8 ವರ್ಷದ ಬಾಲಕ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.

Banner Ad

ಮಹಾರಾಷ್ಟ್ರದ ಕೃಷಿನಗರ ಸಂಗಮಚೌಕ್‌ ನಿವಾಸಿ ವಿಯಾನ ಪ್ರಕಾಶ ವಾಗ್ (8) ಮೃತಪಟ್ಟ ಬಾಲಕನಾಗಿದ್ದಾನೆ.ತಂದೆ ಪ್ರಕಾಶ ವಾಗ್ (48), ತಾಯಿ ಅಮೃತ ವಾಗ್ (38) ಹಾಗೂ ಸಹೋದರಿ ಭೂಮಿಕಾ (16) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ನಾಲ್ವರು ಗೋಕರ್ಣದಿಂದ ಗೋವಾ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದಾಗ, ಗೋವಾದಿಂದ ಕೇರಳ ಕಡೆಗೆ ಸಾಗುತ್ತಿದ್ದ ಕಂಟೇನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಂಟೇನರ್ ರಸ್ತೆ ಅಂಚಿನ ಗುಡ್ಡಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆಯೇ ಒರಗಿದೆ. ಕಾರಿನ ಹಿಂಭಾಗದಲ್ಲಿ ಕುಳಿತಿದ್ದ ವಿಯಾನ ವಾಗ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡಿದ್ದ ಮೂವರನ್ನು ಸ್ಥಳೀಯರು ಮತ್ತು ಪೊಲೀಸರು ತಕ್ಷಣ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಕಂಟೇನ‌ರ್ ವಾಹನ ಚಾಲಕನು ಅಮಲಿನಲ್ಲಿದ್ದು ನಿರ್ಲಕ್ಷ್ಯದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

Banner Ad