Banner Ad

ಸುದ್ದಿ ಕನ್ನಡ ವಾರ್ತೆ

ಪಣಜಿ: ಗೋವಾದಲ್ಲಿ ಸ್ಥಳೀಯ ಟ್ರಕ್ ಅಸೋಸಿಯೇಶನ್ ಮತ್ತು ಗೋವಾದ ಕನ್ನಡಿಗರ ಟ್ರಕ್ ಅಸೋಸಿಯೇಶನ್ ಮಾಪ್ಸಾ ಟ್ರಕ್ ಅಸೋಸಿಯೇಶನ್ ನಡುವೆ ಕಳೆದ ಕೆಲ ದಿನಗಳಿಂದ ವಾಗ್ವಾದ ನಡೆಯುತ್ತಿದೆ. ಗೋವಾದ ಪೆಡ್ನೆಯಲ್ಲಿ ಕನ್ನಡಿಗರ ಟ್ರಕ್ ತಡೆಗಟ್ಟಿ ಸ್ಥಳೀಯ ಟ್ರಕ್ ಸಂಘಟನೆಯವರು ಹಲ್ಲೆ ನಡೆಸಿದ ಘಟನೆಯ ನಂತರ ಗೋವಾದಲ್ಲಿ ಕನ್ನಡಿಗರು ಪ್ರತ್ಯೇಕ ಅಸೋಸಿಯೇಶನ್ ಕಟ್ಟಿಕೊಂಡು ಉದ್ಯೋಗ ನಡೆಸಲು ಮುಂದಾಗಿದ್ದಾರೆ.

Banner Ad

ಇದೀಗ ಕನ್ನಡಿಗರ ಟ್ರಕ್ ಅಸೋಸಿಯೇಶನ್ ಪ್ರತ್ಯೇಕ ತನ್ನದೇ ಆದ ಲೋಗೊ ಕೂಡ ನೀಡಿದ್ದು ಇದೀಗ ಈ ಲೋಗೊಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದು ಗೋವಾದ ಸ್ಥಳೀಯ ಟ್ರಕ್ ಅಸೋಸಿಯೇಶನ್ ಹೇಳಿರುವುದಕ್ಕೆ ಮಾಪ್ಸಾ(ಕನ್ನಡಿಗರ) ಟ್ರಕ್ ಅಸೋಸಿಯೇಶನ್ ತಿರುಗೇಟು ನೀಡಿದೆ.

ಈ ಕುರಿತಂತೆ ಮಾಪ್ಸಾದಲ್ಲಿ ಮಾಪ್ಸಾ ಟ್ರಕ್ ಅಸೋಸಿಯೇಶನ್ ಪತ್ರಿಕಾಗೋಷ್ಠಿ ನಡೆಸಿ ಸಂಘಟನೆಯ ಅಧ್ಯಕ್ಷ ಶಂಭು ಶೆಟ್ಟರ್ ಸ್ಥಳೀಯ ಟ್ರಕ್ ಅಸೋಸಿಯೇಶನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾವು ಭಾರತೀಯರು. ನಾವು ಯಾವುದೇ ರಾಜ್ಯದಲ್ಲಿ ನೆಲೆಸಿ ಉದ್ಯೋಗ ನಡೆಸುವ ಹಕ್ಕಿದೆ. ನಮ್ಮ ಲೋಗೊ ಅಧೀಕೃತವಾದ ಲೋಗೊ ಇದಕ್ಕೆ ಅವರು ಮಾನ್ಯತೆ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಅದರಂತೆಯೇ ಸ್ಥಳೀಯ ಟ್ರಕ್ ಅಸೋಸಿಯೇಶನ್ ಕೂಡ ಪತ್ರಿಕಾಗೋಷ್ಠಿ ನಡೆಸಿ -ಗೋವಾದಲ್ಲಿ ಹೊರ ರಾಜ್ಯ ಕರ್ನಾಟಕದ ಟ್ರಕ್ ಉದ್ಯೋಗಿಗಳು ನಮ್ಮ ಉದ್ಯೋಗ ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದು, ಈ ಕುರಿತು ಸರ್ಕಾರವು ಕ್ರಮ ಕೈಗೊಳ್ಳಬೇಕೆಂದೂ ಮನವಿ ಮಾಡಿದ್ದಾರೆ.
ಗೋವಾದಲ್ಲಿ ಟ್ರಕ್ ಬಾಡಿಗೆ ಉದ್ಯೋಗ ನಡೆಸುತ್ತಿರುವ ಕನ್ನಡಿಗರು ಕಳೆದ ಕೆಲ ದಿನಗಳಿಂದ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಕರ್ನಾಟಕ ಸರ್ಕಾರವು ಗೋವಾದಲ್ಲಿ ಉದರ ನಿರ್ವಹಣೆಗಾಗಿ ಉದ್ಯೋಗ ನಡೆಸುತ್ತಿರುವ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕು ಎಂಬ ಆಘ್ರಹ ವ್ಯಕ್ತವಾಗುತ್ತಿದೆ.

Banner Ad