Banner Ad

ಸುದ್ದಿ ಕನ್ನಡ ವಾರ್ತೆ

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಯಾಕಿಂಗ್ ಹಾಗೂ ರಾಫ್ಟಿಂಗ್ ಜಲ ಕ್ರೀಡಾ ಸ್ಪರ್ಧೆಗಳಲ್ಲಿ ಜೋಯಿಡಾ ತಾಲೂಕಿನ ಗಣೇಶ ಗುಡಿ ಭಾಗದ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಾಲೂಕಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇಲ್ಲಿನ ಪ್ಲೈ ಕ್ಯಾಚರ್ ಹೋಂ ಸ್ಟೇ ಮಾಲಕರಾದ ಬಾಂದ ಕುಟ್ಟಿ ಅವರು ಈ ಗ್ರಾಮೀಣ ಭಾಗದ ಮಕ್ಕಳಿಗೆ ವಾಟರ್ ಸ್ಪೋರ್ಟ್ಸ್ ಹಾಗೂ ಕಯಾಕಿಂಗ್ ಬಗ್ಗೆ ನಿರಂತರವಾಗಿ ಉತ್ತೇಜನ ಮತ್ತು ತರಬೇತಿ ನೀಡುತ್ತಾ ಬಂದಿದ್ದು, ಅವರ ಮಾರ್ಗದರ್ಶನದಲ್ಲಿ ಆಟಗಾರರು ಒಟ್ಟು 24 ಪದಕಗಳನ್ನು ತಮ್ಮದಾಗಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಜಲ ಕ್ರೀಡೆಯಲ್ಲಿ ಮಾತ್ರವಲ್ಲದೆ, ಈ ಭಾಗದ ನದಿ ಹಾಗೂ ನೀರಿನಲ್ಲಿ ಯಾವುದೇ ಅಹಿತಕರ ಘಟನೆ ಅಥವಾ ಪ್ರಾಣಾಪಾಯ ನಡೆದಾಗ ಸ್ಥಳೀಯ ಪೊಲೀಸರಿಗೆ ಮತ್ತು ಸಂತ್ರಸ್ತ ಕುಟುಂಬಗಳ ಸಹಾಯಕ್ಕೆ ಈ ಪ್ಲೈ ಕ್ಯಾಚ‌ರ್ ತಂಡವೇ ಸದಾ ಮುಂಚೂಣಿಯಲ್ಲಿ ನಿಂತು ರಕ್ಷಣಾ ಕಾರ್ಯ ಮಾಡುವುದು ಗಮನಾರ್ಹವಾಗಿದೆ.

Banner Ad

ಮೈಸೂರಿನ ಸ್ಪರ್ಧೆಯ ೧೮ ವರ್ಷದೊಳಗಿನ ಬಾಲಕರ ಬಿಗಿನರ್ಸ್ ಕಯಾಕ್ ವಿಭಾಗದಲ್ಲಿ ತಾಲೂಕಿನ ಆಟಗಾರರೇ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು, ಮೊಹಮ್ಮದ್ ಚಿನ್ನದ ಪದಕ, ಹೈಮದ್ ಬೆಳ್ಳಿಯ ಪದಕ ಹಾಗೂ ಶಾನ್ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೇ ವಯೋಮಿತಿಯ ಪ್ರೊ ವಿಭಾಗದ ಕಯಾಕ್ ಸ್ಪರ್ಧೆಯಲ್ಲಿ ಧನರಾಜ್ ಅವರು ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಬಾಲಕಿಯರ ಬಿಗಿನರ್ಸ್ ಕಯಾಕ್ ಸ್ಪರ್ಧೆಯಲ್ಲೂ ತಾಲೂಕಿನ ಅಟಗಾರ್ತಿಯರೇ ಮೇಲುಗೈ ಸಾಧಿಸಿದ್ದು ವಿಶಾಖಾ ಚಿನ್ನದ ಪದಕ, ವಿಯೋನಾ ಬೆಳ್ಳಿಯ ಪದಕ ಮತ್ತು ಸಚಿ ನಾಯ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನುಳಿದಂತೆ ಪುರುಷರ ಪ್ರೊ ಕಯಾಕ್ ಕ್ರಾಸ್ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಎಂ. ಚವಾಣ್ ಅವರು ಬೆಳ್ಳಿಯ ಪದಕ ಜಯಿಸಿದ್ದಾರೆ. ಪುರುಷರ ಪ್ರೊ ರಾಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಸಾದ್, ಪೃಥ್ವಿರಾಜ್, ಮೆಹಬೂಬ್ ಮತ್ತು ಸುಮಿತ್ ಅವರನ್ನೊಳಗೊಂಡ ತಂಡವು ಅತ್ಯುತ್ತಮ ಸಾಹಸ ಪ್ರದರ್ಶಿಸಿ ಬೆಳ್ಳಿಯ ಪದಕವನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಪುರುಷರ ರಾಫ್ಟಿಂಗ್ ಸ್ಪರ್ಧೆಯಲ್ಲಿ ಜೋಯಿಡಾ ಸುಪಾಗಣೇಶ ಗುಡಿ ಭಾಗದ ಟೀಮ್ ಸುಪಾ ವಾರಿಯರ್ಸ್ ತಂಡದ ಗುರು ನಾಯ್ಡ್, ಹೈಮದ್, ಮೊಹಮ್ಮದ್ ಹಾಗೂ ಧನರಾಜ್ ಅವರು ಜಂಟಿಯಾಗಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಸಾಧನೆಗೈದ ಕ್ರೀಡಾಪಟುಗಳಿಗೆ ಹಾಗೂ ಅವರಿಗೆ ಬೆನ್ನೆಲುಬಾಗಿ ನಿಂತ ಚಾಂದ ಕುಟ್ಟಿ ಮತ್ತು ಪ್ಲೈ ಕ್ಯಾಚರ್ ತಂಡಕ್ಕೆ ಜೋಯಿಡಾ ತಾಲೂಕಿನ ಜನತೆ ಅಭಿನಂದಿಸಿದ್ದಾರೆ.

Banner Ad