Banner Ad

ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ: ತಾಲೂಕಿನ ಮಂಚಿಕೇರಿ ಸಮೀಪದ ತೂಕದಬೈಲ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡು ನರಳುತ್ತಿದ್ದ ವ್ಯಕ್ತಿಗೆ ರಸ್ತೆಯಲ್ಲೇ ತುರ್ತು ಚಿಕಿತ್ಸೆ ನೀಡಿ ಶಿರಸಿಯ ಮಕ್ಕಳ ತಜ್ಞ ಡಾ. ದಿನೇಶ ಹೆಗಡೆ ಮಾನವೀಯತೆ ಮೆರೆದಿದ್ದಾರೆ.

​ತೂಕದಬೈಲ್ ಬಳಿ ಕಳಸಟಗಿಯ ಮಾರುತಿ ಎಂಬವರು ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದರು. ಈ ವೇಳೆ ಸ್ಥಳೀಯರು 108 ಆಂಬುಲೆನ್ಸ್‌ಗೆ ಕರೆ ಮಾಡಿದಾಗ ಚಾಲಕ ಇಲ್ಲ ಎಂಬ ಉತ್ತರ ಬಂದಿದೆ. ನಂತರ ಮಂಚಿಕೇರಿ ಆಸ್ಪತ್ರೆಯ ಆಂಬುಲೆನ್ಸ್‌ಗೆ ಕರೆ ಮಾಡಿದಾಗ ವಾಹನ ಸರ್ವೀಸ್‌ಗೆ ಹೋಗಿದೆ ಎಂದು ಮಾಹಿತಿ ನೀಡಿದ್ದಾರೆ.

Banner Ad

​ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಶಿರಸಿಗೆ ತೆರಳುತ್ತಿದ್ದ ಡಾ. ದಿನೇಶ ಹೆಗಡೆ ಕಾರು ನಿಲ್ಲಿಸಿ ವಿಚಾರಿಸಿದ್ದಾರೆ. ಬಳಿಕ ಗಾಯಾಳು ಮಾರುತಿ ಅವರಿಗೆ ತಕ್ಷಣ ತುರ್ತು ಚಿಕಿತ್ಸೆ ನೀಡಿದ್ದಾರೆ. ಸ್ವಲ್ಪ ಸಮಯದ ನಂತರ ಯಲ್ಲಾಪುರದಿಂದ ತಾಲೂಕು ಆಸ್ಪತ್ರೆಯ ಆಂಬುಲೆನ್ಸ್ ಬಂದಿದ್ದು, ಅದರ ಮೂಲಕ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಯಿತು.
​ಸ್ಥಳದಲ್ಲಿದ್ದು ಸಹಕರಿಸಿದ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸತೀಶ ನಾಯ್ಕ, ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಇರುವ 108 ಆಂಬುಲೆನ್ಸ್ ಸೇವೆ ಲಭ್ಯವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

 

ಯಲ್ಲಾಪುರದಲ್ಲಿ ಎರಡು ಶಿಫ್ಟ್‌ಗಳಿಗೆ ಮಾತ್ರ ಚಾಲಕರಿದ್ದು, ಮಧ್ಯಾಹ್ನದ ಶಿಫ್ಟ್‌ಗೆ ಚಾಲಕರಿಲ್ಲದ ಕಾರಣ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ಮೂರನೇ ಚಾಲಕರನ್ನು ನೇಮಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Banner Ad