Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿ ತಿರುವು ಯೋಜನೆಯ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನ ವಿರೋಧಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದೀಗ ರಿಂಗ್ ರೋಡ್ ಎಂಬ ಮತ್ತೊಂದು ಯೋಜನೆಯು ಈ ಭಾಗದ ಹಳ್ಳಿಗರ ಮತ್ತು ಪರಿಸರವಾದಿಗಳ ನಿದ್ದೆಗೆಡಿಸಿದೆ.

Banner Ad

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಾಳಗಿಮನೆ ಹಾಗೂ ತಟಗಾರ್ ಮೂಲಕ ಈ ರಿಂಗ್ ರೋಡ್ ಪ್ರಸ್ತಾವನೆ ಇದ್ದು ಈಗಾಗಲೇ ಮ್ಯಾಪಿಂಗ್ ಕೂಡ ಪೂರ್ಣಗೊಂಡಿದೆ ಎನ್ನಲಾಗಿದೆ. ಈ ಭಾಗದ ಗುಡೆಪಾಲ್, ಕರಿ ಪಾಲ್, ಬದನೆ ಪಾಲ್, ಮೂಳೆಮನೆ, ಹರಕನಪಾಲ್, ಮಾವಿನ ಗದ್ದೆ, ಈ ಭಾಗದ ಮೂಲಕ 12 ಮೀಟರ್ ಅಗಲದ ಹೆದ್ದಾರಿ ಹಾದುಹೋಗಲಿದೆ. ಇದರಿಂದಾಗಿ ಈ ಭಾಗದಲ್ಲಿ ಭಾರಿ ಪ್ರಮಾಣದ ಅರಣ್ಯ ನಾಶ ಹಾಗೂ ಹತ್ತಾರು ಕುಟುಂಬಗಳ ಜಮೀನು ಮನೆ ಕೂಡ ರಿಂಗ್ ರೋಡ್ ನುಂಗಿ ಹಾಕಲಿದೆ. ಈ ಯೋಜನೆಯಿಂದಾಗಿ ಭಯಭೀತರಾಗಿರುವ ಈ ಭಾಗದ ಗ್ರಾಮಸ್ಥರು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಯೋಜನೆಯ ಕಡೆಗೆ ಆಗ್ರಹಿಸಿ ಮಂಗಳವಾರ ಶಾಸಕ ಶಿವರಾಮ ಹೆಬ್ಬಾರ್ ರವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.

ಪ್ರಸ್ತಾಪಿತ ರಿಂಗ್ ರೋಡ್ ಯೋಜನೆಯ ಹೆದ್ದಾರಿಯೂ ಈ ಭಾಗದ ಎಲ್ಲ ಮನೆಗಳ ಮುಂಭಾಗದಿಂದಲೇ ಹಾದು ಹೋಗುವುದರಿಂದ ಈ ಭಾಗದ ರೈತರ ಮನೆ ಮತ್ತು ಹೆಚ್ಚಿನ ಪ್ರಮಾಣದ ತೋಟ ಗದ್ದೆ, ಅರಣ್ಯ ಕೂಡ ನಾಶವಾಗಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ವಿರೋಧಿ ಹಾಗೂ ಜನ ವಿರೋಧಿ ಯೋಜನೆಗಳಿಂದಾಗಿ ಈಗಾಗಲೇ ಹೋರಾಟಕ್ಕಿಳಿದಿರುವ ಜನರು ಇದೀಗ ಮತ್ತೊಂದು ಯೋಜನೆ ಜಾರಿಗೆ ಬಂದರೆ ಹಳ್ಳಿ ಹಳ್ಳಿಗಳಲ್ಲಿ ರಿಂಗ್ ರೋಡ್ ಯೋಜನೆ ಮೂಲಕ ಭಾರಿ ಪ್ರಮಾಣದ ಅರಣ್ಯ ನಾಶ ಆಗಲಿದೆ ಎಂದು ಪರಿಸರವಾದಿಗಳ ನಿಲುವಾಗಿದೆ.

ಉತ್ತರ ಕನ್ನಡ ಜಿಲ್ಲೆ ಎಂದು ಕೂಡಲೇ ಜನರ ಮನಸ್ಸಲ್ಲಿ ಬರುವುದು ಹಚ್ಚಹಸುರಿನ ಕಾಡು ಹಾಗೂ ನದಿಗಳು. ಆದರೆ ಸರ್ಕಾರದ ಯೋಜನೆಗಳು ಈ ಹಸಿರನ್ನೇ ನಾಶ ಮಾಡುವ ಹಂತಕ್ಕೆ ತಲುಪಿದೆ. ಇದೀಗ ರಿಂಗ್ ರೋಡ್ ಯೋಜನೆ ವಿರುದ್ಧ ಈ ಭಾಗದ ರೈತರು ಹೋರಾಟಕ್ಕಿಳಿದಿದ್ದಾರೆ.

ರಿಂಗ್ ರೋಡ್ ಯೋಜನೆ ಜಾರಿಯಾದರೆ ಈ ಭಾಗದ ಹಳ್ಳಿಗಳಿಗೆ ರಾಷ್ಟ್ರೀಯ ಹೆದ್ದಾರಿ ನುಗ್ಗಿ ಹಲವು ಜನ ಜಮೀನು ಮತ್ತು ಮನೆ ಕಳೆದುಕೊಂಡು ನಿರಾಶ್ರಿತರಾಗುವ ಭೀತಿ ಕೂಡ ಎದುರಾಗಿದೆ. ಒಂದೆಡೆ ಬರಗಾಲ, ಇನ್ನೊಂದೆಡೆ ಸರ್ಕಾರದ ಜನ ವಿರೋಧಿ ಯೋಜನೆಗಳು, ಇದರಿಂದಾಗಿ ಕಂಗೆಟ್ಟಿರುವ ಜನರು ಹೋರಾಟಕ್ಕಿಳಿದಿದ್ದಾರೆ.

ಮಂಗಳವಾರ ಶಾಸಕ ಶಿವರಾಮ ಹೆಬ್ಬಾರ ರವರನ್ನು ನರಸಿಂಹ ಬೋಳಪಾಲ, ನಾರಾಯಣ ಭಟ್ ಮೂಳೆ ಮನೆ, ಕೃಷ್ಣ ಭಟ್ ಬದನೆ ಪಾಲ್, ಮಂಜುನಾಥ್ ಗಾವ್ಕರ್ ಹರಕನ ಪಾಲ್, ವಿಶ್ವನಾಥ ಗಾವ್ಕರ್ ಹರಕನ ಪಾಲ್, ಸೇರಿದಂತೆ ಗ್ರಾಮದ ಹಲವು ಜನ ಪ್ರಮುಖರು ಶಾಸಕರನ್ನು ಭೇಟಿ ಮಾಡಿ ರಿಂಗ್ ರೋಡ್ ಯೋಜನೆಯ ತಡೆಗೆ ಮನವಿ ಮಾಡಿದ್ದಾರೆ.

Banner Ad