Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದ ರಾಜ್ಯ ಸರ್ಕಾರಕ್ಕೆ ಹಾಗೂ ಈ ಭಾಗದ ಹಿರಿಯ ನಾಯಕರಾದ ಶಾಸಕ ಆರ್. ವಿ. ದೇಶಪಾಂಡೆ ಅವರಿಗೆ ಜೋಯಿಡಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಜಂಟಿಯಾಗಿ ಅಭಿನಂದನೆ ಸಲ್ಲಿಸಲಾಯಿತು.

Banner Ad

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಾರುತಿ ಗಾವಡೆ ಅವರು, “ಜೋಯಿಡಾ ತಾಲೂಕಿನಲ್ಲಿ ತೀವ್ರ ಮಳೆ ಅಭಾವ ಉಂಟಾಗಿದ್ದು, ಪರಿಸ್ಥಿತಿಯನ್ನು ಅರಿತು ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿದ ರಾಜ್ಯ ಸರ್ಕಾರಕ್ಕೆ ಹಾಗೂ ನಮ್ಮ ನೆಚ್ಚಿನ ನಾಯಕರಾದ ಆರ್. ವಿ. ದೇಶಪಾಂಡೆ ಅವರಿಗೆ ತಾಲೂಕಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದರು.

ಬಳಿಕ ಕೆಪಿಸಿಸಿ ಸದಸ್ಯರಾದ ಸದಾನಂದ ದಬ್ಗಾರ ಮಾತನಾಡಿ, “ಈ ಬಾರಿ ಜೋಯಿಡಾ ತಾಲೂಕಿನಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದೆ. ಇದರಿಂದಾಗಿ ಈ ಭಾಗದ ಪ್ರಮುಖ ಬೆಳೆಗಳಾದ ಅಡಿಕೆ, ಭತ್ತ ಸೇರಿದಂತೆ ಮುಂತಾದ ಬೆಳೆಗಳಿಗೆ ತೀವ್ರ ನೀರಿನ ಸಮಸ್ಯೆ ಎದುರಾಗಿತ್ತು. ರೈತರ ಈ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ತಾಲೂಕನ್ನು ಬರಪೀಡಿತ ಎಂದು ಘೋಷಿಸಿರುವುದು ಇಲ್ಲಿನ ರೈತ ಸಮುದಾಯಕ್ಕೆ ಹಾಗೂ ಜನತೆಗೆ ದೊಡ್ಡ ಅನುಕೂಲ ಮಾಡಿಕೊಡಲಿದೆ. ಇದಕ್ಕೆ ಶ್ರಮಿಸಿದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಶಾಸಕ ಆರ್. ವಿ. ದೇಶಪಾಂಡೆ ಅವರಿಗೆ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರ ಪರವಾಗಿ ಅಭಿನಂದನೆಗಳು” ಎಂದು ತಿಳಿಸಿದರು.

ಈ ಮಹತ್ವದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಮಂಗೇಶ ಕಾಮತ್, ಮಂಜುನಾಥ ಮೊಕಾಶಿ, ಅರುಣ ದೇಸಾಯಿ, ದತ್ತಾ ನಾಯ್ಕ, ವಿನಯ ದೇಸಾಯಿ, ಶ್ರೀಧರ ದಬ್ಗಾರ, ಪ್ರಭಾವತಿ ಪಾಟೇಕರ, ಭವಾನಿ ಚೌಹ್ಹಾಣ, ಅಕ್ಷಯ ರಾವಳ, ಸುರೇಶ ಗಾವಡಾ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Banner Ad