ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ-ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ ಅವರ ನಿರ್ದೇಶನದ ಮೇರೆಗೆ ಸಾರ್ವಜನಿಕರ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಬೈಲಹೊಂಗಲ ನಗರಸಭೆಯ ವತಿಯಿಂದ ನಗರದ ಕಿತ್ತೂರು ರಾಣಿ ಚನ್ನಮ್ಮಾಜಿ ವೃತ್ತದ ಬಳಿ ಶುದ್ಧ ಕುಡಿಯುವ ನೀರಿನ ಅರವಟಿಕೆ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಬೈಲಹೊಂಗಲ ನಗರಸಭೆಯ ಪೌರಾಯುಕ್ತರಾದ ಶ್ರೀಮತಿ ಭಾಗ್ಯಶ್ರೀ ರಾ.ಹುಗ್ಗಿ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಈ ಅರವಟಿಕೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು. ನಗರದ ಮುಖ್ಯ ರಸ್ತೆ ಹಾಗೂ ಮಾರುಕಟ್ಟೆಗೆ ಆಗಮಿಸುವ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಜೊತೆಗೆ, ಬಿಸಿಲಿನ ತಾಪ ಹೆಚ್ಚಿರುವುದರಿಂದ ನಿಯಮಿತವಾಗಿ ನೀರು ಸೇವಿಸುವುದು ಮತ್ತು ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಕಿರಿಯ ಅಭಿಯಂತರ ಬಸನಗೌಡ ಪಾಟೀಲ, ಹಿರಿಯ ಆರೋಗ್ಯ ನಿರೀಕ್ಷಕ ಎಂ.ಎಂ. ಧಾರವಾಡಕರ, ಕಿರಿಯ ಆರೋಗ್ಯ ನಿರೀಕ್ಷಕರು ಎ.ವೈ. ಹೆಗಡೆ ಹಾಗೂ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಅರವಟಿಕೆಯನ್ನು ಪ್ರಾರಂಭಿಸಿದ ನಗರಸಭೆಯ ಪೌರಾಯುಕ್ತರಾದ ಶ್ರೀಮತಿ ಭಾಗ್ಯಶ್ರೀ ರಾ.ಹುಗ್ಗಿ ಅವರನ್ನು ಸಾರ್ವಜನಿಕರು,ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.