ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರ:ಜಾತಿಯ ಹೆಸರಿನಲ್ಲಿ ಸಮಾಜವನ್ನು ಕತ್ತರಿಸುವ ಕೆಲಸ ವಾಗುತ್ತಿದೆ, ಸಮಾಜ ವನ್ನು ಹೊಲಿಯಬೇಕಾಗಿದೆ, ಸೇರಿಸಬೇಕಾಗಿದೆ.ನಾವೆಲ್ಲರೂ ಒಂದು ನಾವೆಲ್ಲರೂ ಬಂಧು ನಾವೆಲ್ಲರೂ ಹಿಂದೂ ಎಂಬ ಭಾವನೆ ಎಲ್ಲರಲ್ಲೂ ಬರಬೇಕು
ಎಂದು ಚೈತನ್ಯ ರಾಜಾರಾಮ ಕ್ಷೇತ್ರ ಶಿರಳಗಿಯ ಬ್ರಹ್ಮಾನಂದ ಭಾರತೀ ಸ್ವಾಮೀಜಿಗಳು ನುಡಿದರು.
ತಾಲೂಕಿನ ಕುಚಗುಂಡಿಯಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು,
ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಯೋಚನೆ ಬರುವುದು ಸಹ ಪೂರ್ವ ಜನ್ಮದ ಪುಣ್ಯ. ಇನ್ನೊಬ್ಬರ ಯಶಸ್ಸನ್ನು ನೋಡಿ ಖುಷಿ ಪಡುವವರ ಸಂಖ್ಯೆ ಅತೀ ವಿರಳ. ಇನ್ನೊಬ್ಬರ ಏಳಿಗೆಗೆ ಅಡ್ಡಗಾಲು ಹಾಕುವುದು ಧರ್ಮವಲ್ಲ. ಇನ್ನೊಬ್ಬರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರೆ ಅದನ್ನು ಭಗವಂತ ಪೂಜೆ ಎಂದು ಪರಿಗಣಿಸುತ್ತಾನೆ. ಮನುಷ್ಯನ ಶರೀರ ಇರುವುದೇ ಪರೋಪಕಾರಕ್ಕಾಗಿ. ಯಾವ ಅಪೇಕ್ಷೆಯೂ ಇಲ್ಲದೆ ಅನಂತಮೂರ್ತಿ ಹೆಗಡೆ ಯವರು ಸತ್ಕಾರ್ಯವನ್ನು ಮಾಡಿದ್ದಾರೆ. ಅವರಿಂದ ಒಂದಿಷ್ಟು ಜನರು ಪ್ರೇರಣೆ ಪಡೆಯಬೇಕು. ದೇಶ ಕಟ್ಟುವ ಕೆಲಸದಲ್ಲಿ ಕೈ ಜೋಡಿಸುವಂತಾಗಲಿ ಎಂದರು.
ಕುಟುಂಬ ಸೇರಿಕೊಂಡಿದೆ ಎಂದರೆ ಅದಕ್ಕೆ ಮಹಿಳೆಯರೇ ಕಾರಣ. ಗೃಹಿಣಿಯರು ಸರಿಯಿಲ್ಲದಿದ್ದರೆ ಆ ಮನೆ ದುಸ್ಥಿತಿಯತ್ತ ತೆರಳುತ್ತದೆ.
ಮನೆ ಲವಲವಿಕೆಯಿಂದಿರಲು ಮನೆಯಲ್ಲಿ ಗೃಹಿಣಿ ಇರಬೇಕು. ಮಹಿಳೆಯರು ಬಟ್ಟೆಯನ್ನು ಮಾತ್ರ ಹೊಲಿಯದೇ ಕುಟುಂಬವನ್ನು ಬೆಸೆಯುವ ಕೆಲಸ ಮಾಡಬೇಕಿದೆ. ಮನೆಯನ್ನು ಒಡೆಯಲು ಬಿಡದೆ ಸೇರಿಸಿಕೊಂಡು ಹೋಗುವ ಕೆಲಸ ಮಹಿಳೆಯರಿಂದ ಆಗುವಂತೆ ಆಗಲಿ ಎಂದರು.
ಕುಟುಂಬದಲ್ಲಿ ಆತ್ಮೀಯತೆ ಇದ್ದರೆ ಇನ್ನೊಬ್ಬರ ಮುಂದೆ ಕೈ ಚಾಚುವ ಪರಿಸ್ಥಿತಿ ಬರುವುದಿಲ್ಲ. ಸಮಾಜದಲ್ಲಿ ಮಾನಸಿಕ ಸ್ವಾಸ್ಯದ ಕುಸಿತ ವಾಗುತ್ತಿದೆ. ಇದು ಆಗಬಾರದು.
ಭಾರತೀಯ ಸಂಸ್ಕೃತಿಯನ್ನು ಒಡೆಯುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ನಾವು ಅವಕಾಶ ನೀಡಬಾರದು. ನಾವೆಲ್ಲರೂ ಒಂದು ಎಂಬ ಭಾವನೆ ಬರಬೇಕು.
ಈ ಭಾವನೆ ಬರಲು ಊರಿನಲ್ಲಿ ಒಂದು ದೇವಸ್ಥಾನ ಇರಬೇಕು ಎಂದರು.
ಊರು ಸುಂದರವಾಗಿರಲು ಆ ಊರಿನ ದೇವಸ್ಥಾನ ಸುಂದರವಾಗಿರಬೇಕು. ಪೂಜೆ ಧ್ಯಾನಗಳು ನಡೆಯುವುದರಿಂದ ಊರಿನ ಅಭಿವೃದ್ಧಿಯಾಗುತ್ತದೆ. ಮನಸ್ಸಿನ ಸಂಕಲ್ಪಕ್ಕೆ ಅಪಾರ ಶಕ್ತಿಯಿದೆ. ನಮ್ಮೂರ ದೇವಸ್ಥಾನ ನಮ್ಮ ಸ್ವಾಭಿಮಾನ ಎಂಬ ಅಭಿಮಾನ ಎಲ್ಲರಲ್ಲೂ ಬರಬೇಕು.
ಪತ್ರಕರ್ತ ಪ್ರವೀಣ ಹೆಗಡೆ ಕರ್ಜಗಿ ಮಾತನಾಡಿ,
ಇಂದಿನ ಸಮಾಜಕ್ಕೆ ಅನಂತಮೂರ್ತಿ ಹೆಗಡೆ ಅವರಂತಹ‌ ವ್ಯಕ್ತಿಗಳ ಅವಶ್ಯಕತೆ ಇದೆ. ಮಕ್ಕಳಿಗೆ ಸರಿಯಾದ ರೀತಿಯ ಸಂಸ್ಕಾರ ಕೊಡಬೇಕು. ಊರುಗಳು ವೃದ್ಧಾಶ್ರಮವಾಗುವ ಸಮೀಪದಲ್ಲಿದೆ. ಕೃಷಿ ದುಸ್ತರವಾಗುತ್ತಿದೆ. ಹಳ್ಳಿಗಳು ಜೀವಂತವಾಗಿದ್ದಾರೆ ಮಾತ್ರ ನಮ್ಮ ಜಿಲ್ಲೆಯ ಪರಿಸರ ಉಳಿಯುತ್ತದೆ.ಕೃಷಿಯನ್ನು ಉಳಿಸುವ ಕೆಲಸ ಆಗಬೇಕಿದೆ. ಬೆಂಗಳೂರಿಗಿಂತ ಹೆಚ್ಚಿನ ಸಂಪಾದನೆ ಊರಿನಲ್ಲೇ ಮಾಡಬಹುದಾಗಿದೆ. ಹೊಲಿಗೆ ತರಬೇತಿಯಂತಹ ತರಬೇತಿಗಳನ್ನು ಜನರಿಗೆ ನೀಡಿದರೆ ಸ್ವಂತ ಉದ್ಯೋಗ ಮಾಡಿಕೊಂಡು ಯುವಕರು ಹಳ್ಳಿಯಲ್ಲೇ ಇದ್ದು ಅಭಿವೃದ್ಧಿಗೆ ಸಹಕರಿಸುತ್ತಾರೆ. ಜೀವನವನ್ನು ಚಟರಹಿತವಾಗಿ ಇಟ್ಟುಕೊಳ್ಳಬೇಕು. ಹೊಲಿಗೆ ತರಭೇತಿ ಪಡೆದ ಶಿಬಿರಾರ್ಥಿಗಳು ಮುಂದಿನ ದಿನಗಳಲ್ಲಿ ಸ್ವಂತ ಉದ್ಯೋಗವನ್ನು ಆರಂಭಿಸುವಂತಾಗಲಿ ಎಂದರು.

ಹಸ್ರಗೋಡ ಗ್ರಾಪಂ ಮಾಜಿ ಅಧ್ಯಕ್ಷ ಪ್ರದೀಪ ಹೆಗಡೆ ಕರ್ಜಗಿ ಮಾತನಾಡಿ, ಸಮಾಜದ ಉನ್ನತಿಗೆ ಮಹಿಳೆಯರ ಸಬಲೀಕರಣಕ್ಕೆ ಅನಂತಮೂರ್ತಿ ಹೆಗಡೆ ಯವರ ಕೊಡುಗೆ ಅಪಾರವಾಗಿದೆ. ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ನಡೆಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದ್ದಾರೆ ಎಂದರು.
ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ,
ಕುಚಗುಂಡಿ ಗ್ರಾಮಸ್ಥರು ನಮಗೆ ಬಹಳ ಆತ್ಮೀಯತೆ ತೋರುತ್ತಿದ್ದಾರೆ. ಈ ಮೊದಲು ಇದೇ ಗ್ರಾಮದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಗಿತ್ತು. ಇದೀಗ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರವನ್ನು ನಡೆಸಿದ್ದೇವೆ. ಹೊಲಿಗೆ ಕಲಿಕೆ ಮಹಿಳೆಯರಿಗೆ ಅತೀ ಅವಶ್ಯಕವಾಗಿ ಬೇಕಾಗಿರುವಂತದ್ದು. ಜೀವನದಲ್ಲಿ ಅಡುಗೆ ಹಾಗೂ ಹೊಲಿಗೆ ಎರಡು ವಿದ್ಯೆಯನ್ನು ನಾವು ಕಲಿತರೆ ಸ್ವಾವಲಂಬಿಯಾಗಿ ಬದುಕಲು ಬಹಳ ಸಹಕಾರಿಯಾಗಲಿದೆ. ಎಂಥ ಖಾಯಿಲೆ ಬಂದರೂ ಚಿಕಿತ್ಸೆ ಪಡೆಯಬಹುದು. ಆದರೆ ಬಡತನ ಎಂಬ ಕಾಯಿಲೆ ಯನ್ನು ಅನುಭವಿಸುವುದು ಬಹಳ ಕಷ್ಟ. ಬಡತನ ಬಂದಾಗ ನಮ್ಮಿಂದ ಎಲ್ಲರೂ ದೂರವಾಗುತ್ತಾರೆ. ಮಹಿಳೆಯರು ಸ್ವ ಉದ್ಯೋಗ ಮಾಡಿದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದರು.
ನಮ್ಮ ಸಮಾಜದಲ್ಲಿ ಹೊಲಿಯುವವರೀಗಿಂತ ಕತ್ತರಿಸುವವರೇ ಹೆಚ್ಚಾಗುತ್ತಿದ್ದಾರೆ.‌ಜಾತಿ ಗಳ ಹೆಸರಿನಲ್ಲಿ ಜನರನ್ನು ಒಡೆಯುವ ಕೆಲಸ ಆಗುತ್ತಿದೆ. ನಾವೆಲ್ಲ ಹಿಂದೂ ನಾವೆಲ್ಲ ಒಂದು , ನಾವೆಲ್ಲ ಬಂಧು ಎಂಬ ಧ್ಯೇಯ ವಾಕ್ಯವನ್ನು ಮೈಗೂಡಿಸಿಕೊಳ್ಳಬೇಕು. ಹೊಲಿಗೆ ತರಬೇತಿ ಶಿಬಿರವು ಯಾವುದೇ ಭೇದ ಭಾವ ತಾರತಮ್ಯ ವಿಲ್ಲದೇನಡೆದೀದೆ. ಸಾಮರಸ್ಯ ಬೆಳೆದಿದೆ.
ಸಮಾಜವನ್ನು ಹೊಲಿಯುವ ಕೆಲಸ ಆಗಬೇಕು.ಕತ್ತರಿಸುವ ಕೆಲಸ ಮಾಡಬಾರದು. ಧ್ಯಾನ, ಪೂಜೆ , ಚಿಂತಕರ ಹಿತನುಡಿ ಗಳಿಂದ ನೆಮ್ಮದಿ ಸಿಗುತ್ತದೆ. ಆಧ್ಯಾತ್ಮಿಕ ಭಾವನೆಯಿಂದ ನೆಮ್ಮದಿ ಸಿಗುತ್ತದೆ. ಶಿಬಿರದ ಸಮಾರೋಪದ ಹಿನ್ನೆಲೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ನೆರವೆರಿಸಲಾಗಿದೆ. ಪ್ರಸಾದವನ್ನು ಸಾರ್ವಜನಿಕರು ಸ್ವಿಕರಿಸಿದ್ದಾರೆ. ಹೊಲಿಗೆ ಕಲಿತ ಮಹಿಳೆಯರು ಹೊಲಿಗೆ ಉದ್ಯೋಗವನ್ನು ಮುಂದುವರೆಸಬೇಕು.
ನಮ್ಮ ಟ್ರಸ್ಟ್ ವತಿಯಿಂದ ಸಹಕಾರವನ್ನು ನೀಡುತ್ತೇವೆ. ನಮ್ಮ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರಕ್ಕೆ ಇಲ್ಲಿನ ಗ್ರಾಮಸ್ಥರ ಸಹಕಾರ ಅಪಾರವಾಗಿದೆ. ಅವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ ಎಂದರು. ಕುಚಗುಂಡಿಯ ಕಲ್ಯಾಣೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ನಾವೆಲ್ಲರೂ ಸಹಕಾರ ನೀಡುವ ಮೂಲಕ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಮುಖ ಅಣ್ಣಪ್ಪ ಗೌಡ, ಗ್ರಾಪಂ ಮಾಜಿ ಸದಸ್ಯ ಕೆರಿಯಾ ಗೌಡ, ದೇವಸ್ಥಾನದ ಅಧ್ಯಕ್ಷ ಸುಬ್ರಾಯ ಹೆಗಡೆ, ನಾರಾಯಣ ಹೆಗಡೆ ಚಾರೇಕೊಣೆ ,ಹೊಲಿಗೆ ಶಿಕ್ಷಕಿ ಆಶಾ ಶಿರಸಿ ಹಾಗೂ ಯಲುಗಾರ, ದಂಟಕಲ್ , ಕುಚಗುಂಡಿ ಗ್ರಾಮಸ್ಥರು
ಸೇರಿದಂತೆ ಹಲವರು ಇದ್ದರು.
ನೇತ್ರಾವತಿ ಹೆಗಡೆ ಸ್ವಾಗತಿಸಿದರು. ಗುರುನಾಥ ಹುಕ್ಲಕೈ ನಿರೂಪಿಸಿದರು. ವಿನಯ ದಂಟಕಲ್ ವಂದಿಸಿದರು.

ಬಾಕ್ಸ್:
ಹಳ್ಳಿಯ ಜನರಲ್ಲಿ ಸಂಪತ್ತು ಇಲ್ಲದಿದ್ದರೂ ಹೃದಯ ಸಂಪತ್ತು ಅಪಾರವಾಗಿದೆ. ಹಾಗಾಗಿ ಹಳ್ಳಿಯಲ್ಲಿ ನಡೆಯುವ ಕೆಲಸ ಯಶಸ್ವಿಯಾಗುತ್ತದೆ. ಅನಂತಮೂರ್ತಿ ಹೆಗಡೆ ಯವರಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳು ಆಗುವಂತಾಗಲಿ .
ಬ್ರಹ್ಮಾನಂದ ಭಾರತೀ ಸ್ವಾಮೀಜಿ.

ಬಾಕ್ಸ್:
30 ದಿನಗಳ ಕಾಲ ನಡೆದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆಯು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಸೀರೆ ಬಾಗೀನವನ್ನು ಹಾಗೂ ಪ್ರಮಾಣಪತ್ರವನ್ನು ಶ್ರೀಗಳ ಸಮ್ಮುಖದಲ್ಲಿ ವಿತರಿಸಲಾಯಿತು.
ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸುಮಾರು ಮುನ್ನೂರಕ್ಕೂ ಅಧಿಕ ಜನರಿಗೆ ಅನ್ನ ಸಂತರ್ಪಣೆ ನಡೆಯಿತು.
ಕೋಟ್:
ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಹೊಲಿಗೆ ತರಬೇತಿ ಶಿಬಿರವು ನಮಗೆ ಬಹಳ ಸಹಕಾರಿಯಾಗಿದೆ. ಹೊಲಿಗೆ ಯಂತ್ರವನ್ನು ಖರಿಧಿಸುವ ಶಕ್ತಿ ನಮಗಿರಲಿಲ್ಲ. ಒಮ್ಮೆ ಹೊಲಿಗೆ ಯಂತ್ರವನ್ನು ತಂದರೂ ಸಹ ಅದನ್ನು ಕಲಿತಿಕೊಳ್ಳಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿತ್ತು.ಆದರೆ ನಮ್ಮೂರಿನಲ್ಲೆ ಅನಂತಮೂರ್ತಿ ಹೆಗಡೆ ಯವರು ಉಚಿತವಾಗಿ ಹೊಲಿಗೆ ತರಬೇತಿಯನ್ನು ನೀಡಿದ್ದಾರೆ. ಇದರಿಂದ ನಮಗೆ ತುಂಬಾ ಉಪಕಾರವಾಗಿದೆ.‌ ಮುಂದಿನ ದಿನಗಳಲ್ಲಿ ಅನಂತಮೂರ್ತಿ ಹೆಗಡೆ ಅವರಿಂದ ಇನ್ನಷ್ಟು ಸೇವಾ ಕಾರ್ಯಗಳು ನಡೆಯುವಂತಾಗಲಿ.

ಉಚಿತ ಹೊಲಿಗೆ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳು.