ಸುದ್ದಿ ಕನ್ನಡ ವಾರ್ತೆ
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಕನ್ನಡ ಭಾಷೆಗೆ ಯಂಡು ಗುಂಡು ಎಂದು ಲೇವಡಿ ಮಾಡಿದ್ದಕ್ಕೆ ಸಂಬಂಧಿಸಿದಂತೆ ಗೋವಾದ ಕುಟ್ಟಾಳಿ ಮತಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ನಡೆಸಲು ಆರಂಭಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಗೋವಾದಲ್ಲಿ ಗೋವಾ ರಾಖಂಡ ಯಾತ್ರೆ ಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು ಪಾಲ್ಗೊಂಡು ಗೋವಾದ ವಾಸ್ಕೋ ಜುವಾರಿನಗರ ದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಕನ್ನಡದಲ್ಲಿಯೇ ಮಾತನಾಡಿದ್ದರು. ಈ ಕುರಿತಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಕುಟ್ಟಾಳಿ ಮತಕ್ಷೇತ್ರದಲ್ಲಿ ಬಿಜೆಪಿ ಕಚೇರಿಯನ್ನು ಉದ್ಘಾಟಿಸುವ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಕನ್ನಡ ಮಾತನಾಡಿರುವುದಕ್ಕೆ ಲೇವಡಿ ಮಾಡಿದ್ದರು. ಗೋವಾಕ್ಕೆ ಬಂದು ಯಂಡು ಗುಂಡು ಎಂದು ಮಾತನಾಡಿದರೆ ಅವರಿಗೆ ಮತ ಸಿಗುವುದಿಲ್ಲ ಎಂದು ಕನ್ನಡ ಭಾಷೆಗೆ ಗೋವಾ ಮುಖ್ಯಮಂತ್ರಿ ಸಾವಂತ್ ಲೇವಡಿ ಮಾಡಿದ್ದರು.
ಈ ಕುರಿತಂತೆ ಕಾಂಗ್ರೆಸ್ ನಾಯಕ ಮಾರಿಯಾನೋ ರೊಡ್ರಿಗಸ್ ಗೋವಾ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದ್ದಾರೆ. ಗೋವಾ ಮುಖ್ಯಮಂತ್ರಿಗಳು ಕನ್ನಡಿಗರ ಮತಗಳನ್ನು ಬಯಸುವುದಿಲ್ಲ ಎಂದು ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಸುನಿಲ್ ದಾಬಸ್ ರವರು ಮಾರಿಯಾ ನೋ ರೊಡ್ರಿಗಸ್ ರವರು ಎಸೆದಿರುವ ಸವಾಲನ್ನು ಖಂಡಿಸಿದ್ದಾರೆ. ಇದೇ ವ್ಯಕ್ತಿ ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಆ ವ್ಯಕ್ತಿಯ ವಿರುದ್ಧ 11 ಪ್ರಕರಣಗಳು ದಾಖಲಾಗಿವೆ ಎಂದು ಆರೋಪಿಸಿದ್ದಾರೆ.
ಇನ್ನೇನು ಗೋವಾ ವಿಧಾನಸಭಾ ಚುನಾವಣೆ ಘೋಷಣೆ ಆಗಲಿದೆ. ಜನವರಿ ಕೊನೆಯ ವಾರದಲ್ಲಿ ಅಥವಾ ಫೆಬ್ರವರಿಯಲ್ಲಿ ಗೋವಾ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಇದೀಗ ಗೋವಾದಲ್ಲಿ ಕನ್ನಡಿಗರನ್ನೇ ಟಾರ್ಗೆಟ್ ಮಾಡಿಕೊಂಡು ರಾಜಕೀಯ ನಡೆಯುತ್ತಿರುವಂತೆ ಕಂಡುಬರುತ್ತಿದೆ. ಗೋವಾದ ಒಟ್ಟು ಮತದಾರರ ಪೈಕಿ ಕಾಲು ಭಾಗದಷ್ಟು ಕನ್ನಡಿಗರೇ ಮತದಾರರು ಇದ್ದಾರೆ. ಕೆಲ ಮತಕ್ಷೇತ್ರದಲ್ಲಂತೂ ಕನ್ನಡಿಗ ಮತದಾರರೇ ಹೆಚ್ಚಿದ್ದಾರೆ. ಹೀಗಿರುವಾಗ ಗೋವಾ ಮುಖ್ಯಮಂತ್ರಿಗಳಿಗೆ ಗೋವಾದಲ್ಲಿರುವ ಕನ್ನಡಿಗರ ಬಗ್ಗೆ ಅರಿವಿಲ್ಲವೇ…? ಎಂದು ಹಲವು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ.
