ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ತಾಲೂಕಿನಲ್ಲಿ ಮಳೆ ಸರಿಯಾಗಿ,ಸಾಕಷ್ಟು ಪ್ರಮಾಣ ದಲ್ಲಿ ಬೀಳದೇ ಇರುವ ಕಾರಣ ಬತ್ತ ಬೆಳೆದ ರೈತರು, ಸಂಕಷ್ಟ ಅನುಭವಿಸುತ್ತಿದ್ದಾರೆ. ತಾಲೂಕಿನ ಹಲವಾರು ಗ್ರಾಮ ಗಳಲ್ಲಿ ಬತ್ತ ಬೆಳೆಯಲೇ ಇಲ್ಲ,, ಇನ್ನು ಕೆಲವರು ಬತ್ತ ಬೆಳೆದರೂ ಸಾಕಷ್ಟು ಮಳೆ ಬೀಳದೇ ಪೈರು ಒಣಗುತ್ತಿದೆ, ನೀರಿಲ್ಲದೇ ಬೆಳೆ ಹಾಳಾಗಿದೆ,ಜಗಲ್ಬೇಟದ ತಿಂಬೋಲಿ ಗ್ರಾಮದಲ್ಲಿ ಕೂಡ ಇದೇ ಪರಿಸ್ಥಿತಿ ಆಗಿದೆ.ರೈತರು ಮಳೆಯಿಲ್ಲದೆ ಸಂಪೂರ್ಣ ಒಣಗಿ ಹೋಗಿದ್ದ ತಮ್ಮ ಭತ್ತದ ಬೆಳೆಗೆ ಬೇಸತ್ತು, ಟ್ರ್ಯಾಕ್ಟರ್ ಮೂಲಕ ಗದ್ದೆಯನ್ನು ನೆಲಸಮ ಮಾಡಿರುವ ಮನಮಿಡಿಯುವ ಘಟನೆ ಸಂಭವಿಸಿದೆ.
ತಿಂಬೋಲಿ ಗ್ರಾಮದ ನಿವಾಸಿ ಬಬನ ನಾರಾಯಣ ಹಣಬರ ಎಂಬುವವರೇ ಈ ದುರ್ದೈವಿ ರೈತ. ಅವರು ತಮ್ಮ ಗದ್ದೆಯಲ್ಲಿ ಸಾಲ-ಸೋಲ ಮಾಡಿ ಭತ್ತದ ಬೆಳೆಯನ್ನು ಬೆಳೆದಿದ್ದರು. ಆರಂಭದಲ್ಲಿ ಉತ್ತಮವಾಗಿ ಬಂದಿದ್ದ ಬೆಳೆ, ದಿನಕಳೆದಂತೆ ಸೂಕ್ತ ಮಳೆಯಾಗದೇ ಮತ್ತು ನೀರಿನ ಆಸರೆ ಇಲ್ಲದೇ ಗದ್ದೆಯ ಮಣ್ಣು ಸಂಪೂರ್ಣ ಒಣಗಿ ಹೋಗಿತ್ತು ಬತ್ತದ ಸಸಿಗಳು ,ನೀರಿಲ್ಲದೇ ಕಣ್ಣೆದುರೇ ಒಣಗುತ್ತಿದ್ದುದನ್ನು ಕಂಡು ರೈತ ತೀವ್ರ ಹತಾಶರಾಗಿ, ಚಿಂತಿತ ರಾಗಿದ್ದರು.
ಬೆಳೆ ಸಂಪೂರ್ಣವಾಗಿ ನಾಶವಾಗಿದ್ದರಿಂದ ತೀವ್ರ ಬೇಸರಗೊಂಡ ಬಬನ ನಾರಾಯಣ ಹಣಬರ ಅವರು, ನಿನ್ನೆ ತಮ್ಮದೇ ಗದ್ದೆಗೆ ಟ್ರ್ಯಾಕ್ಟರ್ ತಂದು, ಅದಕ್ಕೆ ನೇಗಿಲು ಕಟ್ಟಿ ಇಡೀ ಭತ್ತದ ಬೆಳೆಯನ್ನು ಉಳುಮೆ ಮಾಡಿ ನೆಲಸಮಗೊಳಿಸಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂಬ ಆಕ್ರೋಶ ಮತ್ತು ತೀವ್ರ ನೋವಿನಿಂದ ರೈತ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ತಾಲೂಕಿನಲ್ಲಿ ಬರಗಾಲ ಘೋಷಣೆ ಆಗಿದೆ, ಆದರೆ ಯಾವುದೇ ಪರಿಹಾರ ದೊರೆತಿಲ್ಲ ಮಳೆ ಕೊರತೆಯಿಂದಾಗಿ ಹಲವು ಕಡೆಗಳಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣವೇ ಸಂಬಂಧಪಟ್ಟ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ, ಹಾನಿಯ ಪರಾಮರ್ಶೆ ನಡೆಸಿ ನೊಂದ ರೈತನಿಗೆ ಸೂಕ್ತ ಪರಿಹಾರ ಒದಗಿಸಬೇಕು ಬೆಳೆ ವಿಮೆ ರೈತರೆಲ್ಲರಿಗೂ ಸಿಗುವಂತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
