ಸುದ್ದಿ ಕನ್ನಡ ವಾರ್ತೆ
​​ಜೋಯಿಡಾ: ತಾಲೂಕಿನ ಉಳವಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಹೆಣಕೋಳ ಶಾಲೆಯಲ್ಲಿ ಕಳೆದ 18 ದಿನಗಳಿಂದ ಅಡುಗೆ ಸಿಲಿಂಡರ್ ಲಭ್ಯವಿಲ್ಲದೆ, ಕಟ್ಟಿಗೆ ಒಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

 

​ಶಾಲೆಯ ಗ್ಯಾಸ್ ಸಿಲಿಂಡರ್ ಖಾಲಿಯಾಗಿದ್ದರೂ ಪರ್ಯಾಯ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಅಡುಗೆ ಸಿಬ್ಬಂದಿ ಶಾಲೆಯ ಹೊರ ಆವರಣದಲ್ಲಿ ಸಾಂಪ್ರದಾಯಿಕ ಕಟ್ಟಿಗೆ ಒಲೆ ಹೂಡಿ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸುತ್ತಿದ್ದಾರೆ. ಹಗೆಯ ನಡುವೆಯೇ ಪ್ರತಿದಿನ ಮಕ್ಕಳಿಗೆ ಅಡುಗೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕುರಿತು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ವಾಸು ಬಿರಂಗತ, ಸಮಿತಿಸದಸ್ಯರು ಹಾಗೂ ಶಿಕ್ಷಕರು ತೀವ್ರ ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನನಿತ್ಯ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವುದರಿಂದ ಸಮಯ ವ್ಯರ್ಥವಾಗುವುದರ ಜೊತೆಗೆ ಹೊಗೆಯಿಂದ ಮಕ್ಕಳು ಹಾಗೂ ಅಡುಗೆ ಸಿಬ್ಬಂದಿಯ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

 

ಶಾಲೆಯಲ್ಲಿ ಮಕ್ಕಳಿಗೆ ಸುರಕ್ಷಿತ ಹಾಗೂ ಸಮರ್ಪಕ ರೀತಿಯಲ್ಲಿ ಬಿಸಿಯೂಟ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಗ್ಯಾಸ್ ಸಿಲಿಂಡರ್ ಪೂರೈಸಬೇಕು ಎಂದು ಶಾಲಾ ಆಡಳಿತ ಮಂಡಳಿ, ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.