ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ನವೆಂಬರ್ 3 ರಂದು ನದಿ ಜೋಡಣೆ ವಿರೋಧಿಸಿ ಯಲ್ಲಾಪುರದಲ್ಲಿ ಹಮ್ಮಿಕೊಂಡಿರುವ ಹೋರಾಟದಲ್ಲಿ ಹದಿನೈದು ಸಾವಿರಕ್ಕೂ ಅಧಿಕ ಜನರು ಭಾಗವಹಿಸಿ ನದಿ ಜೋಡಣೆಗೆ ಇರುವ ವಿರೋಧವನ್ನು ಸರ್ಕಾರದ ಗಮನಕ್ಕೆ ತರಬೇಕು ಎಂದು ರಸ್ತೆ ತಡೆ ಸಂಚಾಲನ ಸಮಿತಿಯ ಪ್ರಧಾನ ಸಂಚಾಲಕ ಹರಿಪ್ರಕಾಶ್ ಕೋಣೆ ಮನೆ ನುಡಿದರು.

ಬೇಡ್ತಿ ವರದಾ ನದಿ ಜೋಡಣೆ ವಿರೋಧಿಸಿ ನವೆಂಬರ್ ಮೂರರಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದಲ್ಲಿ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಹೆದ್ದಾರಿ ತಡೆ ಆಂದೋಲನವನ್ನು ಯಶಸ್ವಿಗೊಳಿಸಲು ಅಡಿಕೆ ಭವನದಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಭೆಯನ್ನು ಉದ್ದೇಶಿಸಿ ಹರಿಪ್ರಕಾಶ್ ಕೋಣೆ ಮನೆ ಮಾತನಾಡಿದರು.

ರಸ್ತೆ ತಡೆ ಆಂದೋಲನದ ಕುರಿತು ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆಯಿತು. ರಾಮು ನಾಯಕ್ ಮತ್ತು ಪ್ರಸಾದ್ ಹೆಗಡೆ ರವರ ನೇತೃತ್ವದಲ್ಲಿ ಪಟ್ಟಣದ ವಿವಿಧ ಭಾಗಗಳಲ್ಲಿ ಸಂಪರ್ಕ ಸಭೆ ನಡೆಸಿ ಜನರನ್ನು ಸಂಘಟಿಸಲು ನಿರ್ಧರಿಸಲಾಯಿತು. ನವೆಂಬರ್ 3ರಂದು ನಡೆಯುವ ಈ ಹೋರಾಟದಲ್ಲಿ ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿಸುವ ಕುರಿತಂತೆ ವ್ಯಾಪಾರಸ್ಥರಲ್ಲಿ ಮನವಿ ಮಾಡುವ ತೀರ್ಮಾನ ಕೈಗೊಳ್ಳಲಾಯಿತು.

Banner Ad

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಯಲ್ಲಾಪುರ ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ ಈ ಹಿಂದೆ ಸೋಂದಾ ಸ್ವರ್ಣವಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ನಡೆದ ಹೋರಾಟದಂತೆ ಪ್ರಸ್ತುತ ಹೋರಾಟವು ಕೂಡ ಯಶಸ್ವಿಯಾಗಲು ಎಲ್ಲರೂ ಪ್ರಯತ್ನ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಾಗರೀಕ ವೇದಿಕೆಯ ಅಧ್ಯಕ್ಷ ರಾಮು ನಾಯಕ್ ಮಾತನಾಡಿ_ ನದಿ ಜೋಡಣೆಯ ವಿರುದ್ಧದ ಈ ಹೋರಾಟವು ಜನಸಾಮಾನ್ಯರ ಸಾಮಾಜಿಕ ಚಳುವಳಿಯಾಗಿ ರೂಪುಗೊಳ್ಳಬೇಕು ಎಂದರು.

ಈ ಸಭೆಯಲ್ಲಿ ಮಾತೃ ಮಂಡಳಿಯ ಆಶಾ ಭಗನಗದ್ದೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಲಿಂಗಯ್ಯ ಮಲ್ಲಯ್ಯನವರ ಮಠ, ಸಂಕಲ್ಪ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಹೆಗಡೆ, ಎಂ ಆರ್ ಹೆಗಡೆ , ನರಸಿಂಹ ಸಾತೊಡ್ಡಿ ಮತ್ತಿತರರು ಉಪಸ್ಥಿತರಿದ್ದರು.