​ಸುದ್ದಿ ಕನ್ನಡ ವಾರ್ತೆ
​ಹೊನ್ನಾವರ:ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಸಮೀಪದ ಆರೋಳ್ಳಿ ತಿರುವಿನಲ್ಲಿ ಗುರುವಾರ ಬೆಳಿಗ್ಗೆ ತೆಂಗಿನಕಾಯಿ ಚಿಪ್ಪು ಸಾಗಿಸುತ್ತಿದ್ದ ಲಾರಿಯೊಂದು ರಸ್ತೆ ಪಕ್ಕದ ಗಟಾರಕ್ಕೆ ಪಲ್ಟಿಯಾಗಿ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್‌ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ.

​ಹೊನ್ನಾವರದಿಂದ ಕಿತ್ತೂರಿನತ್ತ ತೆಂಗಿನಕಾಯಿ ಚಿಪ್ಪು ತುಂಬಿಕೊಂಡು ತೆರಳುತ್ತಿದ್ದ ಲಾರಿ, ಆರೋಳ್ಳಿ ಸಮೀಪದ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗಟಾರಕ್ಕೆ ಉರುಳಿದೆ ಎಂದು ತಿಳಿದುಬಂದಿದೆ. ಅಪಘಾತದ ಪರಿಣಾಮ ಲಾರಿಗೆ ಹಾನಿಯಾಗಿದ್ದು, ಚಾಲಕ ಸುರಕ್ಷಿತವಾಗಿ ಪಾರಾಗಿದ್ದಾರೆ.

​ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೊನ್ನಾವರ ಪೊಲೀಸ್‌ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಲಾರಿಯನ್ನು ತೆರವುಗೊಳಿಸುವ ಕಾರ್ಯ ಕೈಗೊಂಡು, ಕೆಲಕಾಲ ಅಸ್ತವ್ಯಸ್ತಗೊಂಡಿದ್ದ ವಾಹನ ಸಂಚಾರವನ್ನು ಸುಗಮಗೊಳಿಸಲಾಯಿತು.

​ಆರೋಳ್ಳಿ ತಿರುವಿನಲ್ಲಿ ಈ ಹಿಂದೆ ಕೂಡ ಹಲವು ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ, ಈ ಭಾಗದಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.