ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನಲ್ಲಿ ಕಳೆದ ಎರಡು ದಿವಸಗಳಿಂದ ಮಳೆ ಜೋರಾಗಿದ್ದು, ಹಲವೆಡೆ ಹಾನಿ ಉಂಟಾಗಿದೆ. ಯಲ್ಲಾಪುರ-ಮುಂಡಗೋಡ ರಸ್ತೆಯಲ್ಲಿ ಕುಜ್ಜಗಾಂವ ಕ್ರಾಸ್ ಬಳಿ ಬೃಹತ್ ಗಾತ್ರದ ಮರವೊಂದು ಬಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ವಿದ್ಯುತ್ ಲೈನ್ ಮೇಲೆ ಮರ ಬಿದ್ದಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಯಿತು. ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರ ತೆರವುಗೊಳಿಸಿದರು.
ತಾಲೂಕಿನ ಕಳಚೆ ಭಾಗದಲ್ಲಿ ಜೋರಾದ ಮಳೆ ಸುರಿಯುತ್ತಿದ್ದು, ಬುಧವಾರ ರಾತ್ರಿ ಹೆಬ್ಬಾರಕುಂಬ್ರಿ ಬಳಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಹೆಬ್ಬಾರಕುಂಬ್ರಿ ಬಳಿಯ ತಿರುವಿನಲ್ಲಿ ಕಳಚೆ ರಸ್ತೆಯ ಮೇಲೆ ಧರೆಯ ಮೇಲಿನಿಂದ ಕಲ್ಲುಬಂಡೆಗಳು, ಮಣ್ಣು ಕುಸಿದು ಬಿದ್ದಿವೆ. ಕಳೆದ ಎರಡು ದಿನಗಳಿಂದ ಮಳೆ ಜೋರಾಗಿದ್ದು, ಮಣ್ಣು ಸಡಿಲಗೊಂಡು ಈ ಘಟನೆ ಸಂಭವಿಸಿದೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ನಾಲ್ಕು ವರ್ಷಗಳ ಹಿಂದೆ ಉಂಟಾಗಿದ್ದ ಭಾರಿ ಭೂಕುಸಿತ, ಹಾನಿಯ ನೆನಪು ಇನ್ನೂ ಮಾಸದೇ ಇರುವುದರಿಂದ, ಮಳೆಗಾಲ ಆರಂಭವಾಗುತ್ತಿದ್ದಂತೆ ಸ್ಥಳೀಯರಲ್ಲಿ ಸಹಜವಾಗಿ ಆತಂಕ ಮೂಡುತ್ತಿದೆ.
