ಸುದ್ದಿ ಕನ್ನಡ ವಾರ್ತೆ
ಶಿರಸಿ: ಬನವಾಸಿಯಲ್ಲಿ ಕರ್ನಾಟಕ ಗಾಂಧಿ ಹರ್ಡೀಕರ್ ಮಂಜಪ್ಪ ಅವರ ಜನ್ಮಸ್ಥಳದಲ್ಲಿ 21 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಹರ್ಡೀಕರ್ ಮಂಜಪ್ಪ ಸ್ಮಾರಕ ಭವನದ ಕಾಮಗಾರಿ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಕಚೇರಿಯ ಸಾಮಗ್ರಿಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.
ಬನವಾಸಿಯಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಸ್ಮಾರಕ ಭವನ ನಿರ್ಮಿಸಲಾಗಿತ್ತು. ಕಾಮಗಾರಿಗೆ ಸಂಬಂಧಿಸಿದ ಹೆಚ್ಚುವರಿ ಮೊತ್ತ, ಬಡ್ಡಿ ಸೇರಿದಂತೆ ಒಟ್ಟು ಸುಮಾರು 21 ಲಕ್ಷ ಪಾವತಿಯಾಗಬೇಕಿದೆ ಎಂದು ಗುತ್ತಿಗೆದಾರ ಅನಂತ ಭಟ್ಟ ಬೆಳ್ಳೇಕೇರಿ ನ್ಯಾಯಾಲಯದ ಮೊರೆ ಹೋಗಿದ್ದರು. ಹೈಕೋರ್ಟ್ ಆದೇಶದ ಬಳಿಕವೂ ಮೊತ್ತ ಪಾವತಿಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೂಲಕ ಜಪ್ತಿ ಕ್ರಮ ಕೈಗೊಳ್ಳಲಾಗಿದೆ.
ಗುತ್ತಿಗೆದಾರರ ಪರವಾಗಿ ಕೆಳ ಹಂತದ ನ್ಯಾಯಾಲಯದಲ್ಲಿ ಆರ್.ಜಿ. ಹೆಗಡೆ ಕೇರಿಮನೆ ಹಾಗೂ ಹೈಕೋರ್ಟ್ನಲ್ಲಿ ಕೆ.ಎಲ್. ಪಾಟೀಲ ವಾದಿಸಿದ್ದರು.
ನ್ಯಾಯಾಲಯದ ಆದೇಶದಂತೆ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಕಚೇರಿಯ ಸುಮಾರು 21 ವಿವಿಧ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ದೈನಂದಿನ ಕಚೇರಿ ಕಾರ್ಯಕ್ಕೆ ಬಳಸುತ್ತಿದ್ದ ವಿಭಾಗದ ಮುಖ್ಯ ಎಂಜಿನಿಯರ್ ಅವರ ಕುರ್ಚಿ, ವಿವಿಧ ಯಂತ್ರೋಪಕರಣಗಳು, ಟೇಬಲ್ ಸೇರಿದಂತೆ ಹಲವು ಸಾಮಗ್ರಿಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
21 ವರ್ಷಗಳ ಹಿಂದಿನ ಕಾಮಗಾರಿಗೆ ಸಂಬಂಧಿಸಿದ ಬಾಕಿ ಮೊತ್ತದ ವಿವಾದ ಇದೀಗ ಕಚೇರಿ ಸಾಮಗ್ರಿಗಳ ಜಪ್ತಿ ಹಂತಕ್ಕೆ ತಲುಪಿರುವುದು ಗಮನ ಸೆಳೆದಿದೆ.
