ಸುದ್ದಿ ಕನ್ನಡ ವಾರ್ತೆ
ಜೊಯಿಡಾ ತಾಲೂಕಿನ ಕುಂಬಾರವಾಡ ದಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಯಿತು. ಇಂದಿನ ಸಭೆಯಲ್ಲಿ ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು ಶಾಸಕರು ಆಗಿರುವ ಆರ್.ವಿ.ದೇಶಪಾಂಡೆ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೇಶಪಾಂಡೆ ಅವರು ಸರಕಾರದ ಆಡಳಿತ ಮನೆ ಬಾಗಿಲಿಗೆ ಬಂದಿದೆ ನಿಮ್ಮ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಹಿಂದಿನಂತೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೊಳ್ಳದೆ ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆ ಪರಿಹರಿಸಬೇಕು. ಕೆಲಸದಲ್ಲಿ ವಿಳಂಬ ಮಾಡದೆ ಜನರ ಸೇವೆಯೇ ಜನಾರ್ಧನ ಸೇವೆ ಎಂದು ಮಾಡಬೇಕು. ಅಂದಾಗ ಮಾತ್ರ ಸರಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಇಂದಿನದು ಸ್ಪರ್ಧಾ ಯುಗ, ಜಗತ್ತು ಹತ್ತಿರವಾಗಿದೆ. ನಮ್ಮ ಪ್ರಯತ್ನಗಳು ಹೆಚ್ಚಾಗಬೇಕು. ಜನ ನಮ್ಮನ್ನು ಗಮನಿಸುತ್ತಾರೆ. ಅಧಿಕಾರಿಗಳು, ವರ್ಗವಾಗಿ ಹೋದರೂ ಅವರ ಕೆಲಸ ಜನರು ಅವರನ್ನನೆನಪಿಸುವಂತಿರಬೇಕು. ಜನ ಸ್ನೇಹಿಯಾಗಿ ಕೆಲಸ ಮಾಡಬೇಕು.ಅಧಿಕಾರಿ ಗಳ ಕರ್ತವ್ಯ ನೋಡಿ ಜನ ಮೆಚ್ಚುವಂತಿರ ಬೇಕು. ಇದಕ್ಕೆ ಸಹಾಯಕ ಕಮಿಷನರ್ ಅವರು ತಹಶೀಲ್ದಾರ್ ಮತ್ತು ಇ.ಓ ಗಳು ತಾಲೂಕಿನ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಬೇಕು ಅಂದಾಗ ಮಾತ್ರ ಈ ಪ್ರಜಾ ಸೇವೆಗೆ ಅರ್ಥ ಬರುತ್ತದೆ ಎಂದರು.

ತಾಲೂಕಿನ 88 ಹಳ್ಳಿಗಳಿಗೆ ತೂಗುಗತ್ತಿಯಾಗಿರುವ ಕಸ್ತೂರಿ ರಂಗನ್ ವರದಿಗೆ ಯಾರು ಆತಂಕ ಪಡಬಾರದು. ಈ ಬಗ್ಗೆ ಸಂಸದರಿಗೆ ಮತ್ತು ಕೇಂದ್ರ ಸಚಿವ ಉಪೇಂದ್ರ ಯಾದವ್ ಅವರಿಗೆ ಮನವಿ ನೀಡಿ ಈ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತ ಪಡಿಸಿದ್ದೇನೆ ಎಂದರು. ಈ ಸಂದರ್ಭದಲ್ಲಿ ಬಂದ ನೂರಾರು ಅರ್ಜಿಗಳ ಪರಿಶೀಲನೆ ನಡೆಯಿತು.

ತಹಶೀಲ್ದಾರ್ ಮಂಜುನಾಥ ಮನ್ನೊಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯಲ್ಲಿ ಎ.ಸಿ ರಶ್ಮಿ , ಡಿವೈಎಸ್ಪಿ ಶಿವಾನಂದ್ ಮದರಖಂಡಿ , ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಕೆಪಿಸಿಸಿ ಸದಸ್ಯ ಸದಾನಂದ ದಬಗಾರ,ಇ ಓ ಭಾರತಿ ಎನ್, ಗ್ಯಾರಂಟಿ ಅಧ್ಯಕ್ಷ ಮಂಗೇಶ್ ಕಾಮತ ಉಪಸ್ಥಿತರಿದ್ದರು.