ಸುದ್ದಿ ಕನ್ನಡ ವಾರ್ತೆ

ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ಹಾಗೂ ಟಾಟಾ ಇಟಾಚಿ, ಧಾರವಾಡ ಇವರ ಸಹಯೋಗದಲ್ಲಿ ಉಳವಿ ಗ್ರಾಮದಲ್ಲಿ “ಡಿಸೈನ್ ಆಫ್ ಫ್ಯಾಶನ್ ಬ್ಲೌಸ್” ಹತ್ತು ದಿನಗಳ ಉಚಿತ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು.

ಕಾರ್ಯಕ್ರಮವನ್ನು ಉಳವಿ ಗ್ರಾಮ ಪಂಚಾಯತಿಯ ಪಿಡಿಒ ದತ್ತಾತ್ರಯ ಅವರು ಉದ್ಘಾಟಿಸಿದರು , ಅವರು ಮಾತನಾಡಿ ಮಹಿಳೆಯರು ಇಂತಹ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಳವಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಲಕ್ಷ್ಮೀಕಾಂತ್, ಅವರು ಮಾತನಾಡಿ ಸ್ವಯಂ ಉದ್ಯೋಗಕ್ಕೆ ಕೌಶಲ್ಯ ತರಬೇತಿಗಳ ಮಹತ್ವವನ್ನು ವಿವರಿಸಿ, ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಶುಭ ಹಾರೈಸಿದರು.

ಅಶೋಕ್ ಸೂರ್ಯವಂಶಿ, ಯೋಜನಾಧಿಕಾರಿಗಳು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಜೋಯಿಡಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿಯ ಉದ್ದೇಶ ಹಾಗೂ ಅದರ ಪ್ರಯೋಜನಗಳ ಕುರಿತು ವಿವರಿಸಿದರು.
ಈ ಹತ್ತು ದಿನಗಳ ತರಬೇತಿಯಲ್ಲಿ ಫ್ಯಾಶನ್ ಬ್ಲೌಸ್ ವಿನ್ಯಾಸ, ಅಳತೆ, ಕಟಿಂಗ್, ಹೊಲಿಗೆ ಹಾಗೂ ಆಧುನಿಕ ವಿನ್ಯಾಸಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ವಸ್ತ್ರದ್ ಮೇಡಂ, ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಕಲಾವತಿ ಇಂಗಳಗಿ, ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ದೀಕ್ಷಿತಾ ವೆಲಿಪ್ ಹಾಗೂ ಗ್ರಾಮಸ್ಥರು ಮತ್ತು ತರಬೇತಿ ಪಡೆಯುತ್ತಿರುವ ಮಹಿಳೆಯರು ಉಪಸ್ಥಿತರಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.