ಸುದ್ದಿ ಕನ್ನಡ ವಾರ್ತೆ
ಜಿಲ್ಲೆಯ ಯಲ್ಲಾಪುರ , ಮುಂಡಗೋಡ ತಾಲೂಕು ಬರ ಪೀಡಿತ ತಾಲೂಕು ಎಂದು ಸರಕಾರ ಘೋಷಿಸಿದೆ. ಇದಕ್ಕೆ ಕಾರಣರಾದ ಶಾಸಕ ಶಿವರಾಮ ಹೆಬ್ಬಾರ್ ಗಟ್ಟಿತನಕ್ಕೆ ಜಿಲ್ಲೆಯಾದ್ಯಂತ ಅದರಲ್ಲೂ ಜೊಯಿಡಾ ತಾಲೂಕಿನ ಜನತೆ ಹೆಬ್ಬಾರ್ ಅವರನ್ನು ಅಭಿನಂದಿಸಿ ರೈತರ ಬಗ್ಗೆ ನಿಮಗಿದ್ದ ಕಾಳಜಿ ಜಿಲ್ಲೆಯ ಯಾವ ಶಾಸಕರಿಗೂ ಇಲ್ಲ. ಹಾಗಾಗಿ ನೀವು ಗಟ್ಟಿಗರು , ನೀವು ಸರಕಾರ ದಲ್ಲಿ ಜಿಲ್ಲೆಯ ಮಂತ್ರಿಯಾಗಲು ಯೋಗ್ಯ ವ್ಯಕ್ತಿಗಳು , ಮುಂದಿನ ಸಲವಾದರೂ ಮಂತ್ರಿಯಾಗಿ ಹಿಂದುಳಿದ ಜೊಯಿಡಾ ತಾಲೂಕಿನ ಜನರ ಸಂಕಷ್ಟಕ್ಕೆ ಸ್ಪಂದಿಸಿರಿ ಎಂದು ಹೆಬ್ಬಾರಣ್ಣ ಅವರನ್ನು ಅಭಿನಂದಿಸಿದ್ದಾರೆ.
ಜೊಯಿಡಾ ದಲ್ಲಿ ಈ ಬಾರಿ ಕಳೆದ ಬಾರಿಗಿಂತ ಮಳೆ ತುಂಬಾ ಕಡಿಮೆ ಆಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕಾಳಿ ನದಿಯಲ್ಲಿ ಪ್ರವಾಹ ಹರಿದು ಸುಪಾ ಜಲಾಶಯ ತುಂಬಿ ತುಳುಕುತ್ತಿತ್ತು. ಶಾಸಕ ಆರ್.ವಿ ದೇಶಪಾಂಡೆ ಅವರು ಬಾಗಿನ ಅರ್ಪಿಸಿದ್ದರು . ಆದರೆ ಈ ವರ್ಷ ಜಲಾಶಯ ಭರ್ತಿ ಆಗಲು ಇನ್ನೂ 20 ಮೀಟರುಗಳ ನೀರಿನ ಕೊರತೆ ಇದೆ. ಈಗ ತುಂಬದ ಜಲಾಶಯ ಮುಂದೆ ತುಂಬುವುದು ಕಷ್ಟ. ಹಾಗಾಗಿ ಜಲಾಶಯದ ಅಡಿಯಲ್ಲಿ ಪ್ರವಾಸೋಧ್ಯಮ ಇಲಾಖೆಯಿಂದ ನಡೆಯುತ್ತಿರುವ ರಾಫ್ಟಿಂಗ್ ಕೂಡ ನಿಲ್ಲಿಸಲಾಗಿದೆ. ಐದು ಸಾವಿರ ಹೆಕ್ಟೇರ್ ಬತ್ತ ಬೆಳೆಯುವ ಕ್ಷೇತ್ರದಲ್ಲಿ ಇನ್ನೂ ಒಂದು ಸಾವಿರ ಹೆಕ್ಟೇರ್ ನಾಟಿ ಕೆಲಸ ನಡೆದಿಲ್ಲ. ಭತ್ತದ ಕಣಜ ಎಂದು ಕರೆಯುವ ಜೊಯಿಡಾ ದಲ್ಲಿ ಬತ್ತದ ಗದ್ದೆಗಳು ನೀರಿಲ್ಲದೆ ಒಣಗುತ್ತಿವೆ. ಮುಂದಿನ ವರ್ಷ ಒಣ ಹುಲ್ಲಿಗೂ ತತ್ಪಾರ ಆಗಲಿದೆ. ಆದರೆ ಇದರ ಕಲ್ಪನೆ ಮಾಡದ ಶಾಸಕರು ಮಂತ್ರಿ ಮಂಡಲದಲ್ಲಿ ಅವಕಾಶ ಗಿಟ್ಟಿಸುವುದೇ ದೊಡ್ದ ಕಾರ್ಯವೆಂದು ತಿಳಿದು ರೈತರ ಕಣ್ಣೀರು ಒರೆಸುವಲ್ಲಿ ಎಡವಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ
ಹಿರಿಯ ಶಾಸಕರು ಎಂದು ಹೇಳಿ ಕೊಂಡರೆ ಸಾಲದು ಜನತೆಗೆ ಅಗತ್ಯ ಸೌಲಭ್ಯ ನೀಡಲು ಶಾಸಕರು ಪ್ರಯತ್ನಿಸಬೇಕಿತ್ತು ಎಂದಿದ್ದಾರೆ. ತಾಲೂಕಿನಲ್ಲಿ ಒಂದು ನ್ಯಾಯಾಲಯವಿಲ್ಲ. ಬಸ್ ಡಿಪೋ ಇಲ್ಲ,ಸಬ್ ರಿಜಿಸ್ಟ್ರಾರ್ ಕಚೇರಿ ಇಲ್ಲ. ಶಾಲೆ ಕಾಲೇಜ್ ವಿದ್ಯಾರ್ಥಿಗಳು ಪಾಸ್ ಪಡೆಯಲು ಕೂಡ ತಾಲೂಕಿನಲ್ಲಿ ವ್ಯವಸ್ಥೆ ಇಲ್ಲ. ಇದನ್ನೆಲ್ಲ ಶಾಸಕರಾದವರು ನಿವಾರಿಸ ಬೇಕಿತ್ತು
ಹಿಂದೆ ಅಧಿಕಾರ ನಡೆಸಿದ ಅವಧಿಯಲ್ಲಿ ಯಾವ ಸರಕಾರ ಬಂದರೂ ಮಂತ್ರಿಯಾಗುತ್ತಿದ್ದ ಶಾಸಕರು ತಾಲೂಕಿನ ಇಲ್ಲಗಳ ನಿವಾರಣೆ ಮಾಡಬೇಕಿತ್ತು. ಅರಣ್ಯ ಇಲಾಖೆಗಳ ವಿವಿಧ ಯೋಜನೆಗಳಿಂದ ಜನತೆ ಹೈರಾಣಾಗಿದ್ದಾರೆ. ಈ ಬಗ್ಗೆ ಕೂಡ ಶಾಸಕರಾಗಲಿ ಅವರ ಹಿಂಬಾಲಕ ರಾಗಲಿ ಯಾವ ಪ್ರತಿಕ್ರಿಯೆ ಕೂಡ ನೀಡುತ್ತಿಲ್ಲ.
ಕಳೆದ ಸಾಲಿನಲ್ಲಿ ರೈತರಿಗೆ ಬೆಳೆವಿಮೆ ಕೂಡ ಸರಿಯಾಗಿ ಸಿಗಲಿಲ್ಲ ಇದಕ್ಕೆ ಕಾರಣ ಮಳೆ ಮಾಪನ ಕೇಂದ್ರ ಸರಿಯಾಗಿ ಇಲ್ಲದಿರುವುದು. ಇದನ್ನು ಸರಿಪಡಿಸಲು ಶಾಸಕರು ಪ್ರಯತ್ನಿಸ ಬೇಕಿತ್ತಲ್ಲವೇ? ಅವರದೇ ಸರಕಾರ ಇದ್ದರೂ ಬಡ ತಾಲೂಕಿನ ಜನರ ಬವಣೆ ನಿವಾರಿಸಲು ಆಗದೆ ಇದ್ದರೆ ಅದಕ್ಕೆ ಯಾರು ಹೊಣೆ, ಎನ್ನುವುದನ್ನಾದರೂ ತಿಳಿಸಲಿ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.
ಬಸ್ ಘಟಕ , ನ್ಯಾಯಾಲಯ ಸಬ್ ರಿಜಿಸ್ಟ್ರಾರ್ ಕಚೇರಿ , ವಿದ್ಯಾರ್ಥಿಗಳ ಪಾಸ್ (ಕೌಂಟರ್) ಗಳಿಗೆ ದಾಂಡೇಲಿ ಹಳಿಯಾಳ ಅಲೆಯಲು ಸಾಧ್ಯವೇ ? ವಿಸ್ತಾರವಾದ ತಾಲೂಕಿಗೆ ಸರಿಯಾಗಿ ರಸ್ತೆ ಸೇತುವೆಗಳಿಲ್ಲ , ಸಾರಿಗೆ ಇಲ್ಲ, ನೆಟ್ವರ್ಕ್ ಇಲ್ಲ. 21 ನೆ ಶತಮಾನದತ್ತ ಜಗತ್ತು ದಾಪುಗಾಲು ಹಾಕಿದರೂ ಜೊಯಿಡಾ ಕ್ಕೆ ಮಾತ್ರ ಏನಿಲ್ಲಗಳ ಭಾಗ್ಯವೇ ಗತಿಯಾಗಿದೆ. ಮಂತ್ರಿ ಗಿರಿಯ ಆಶೆ ಬಿಟ್ಟು ಕ್ಷೆತ್ರದ ಎಲ್ಲ ತಾಲೂಕು ಗಳಲ್ಲಿ ಇರಬೇಕಾದ ಮೂಲ ಸೌಕರ್ಯ ಗಳನ್ನು ಒದಗಿಸುವಲ್ಲಿ ಪ್ರಯತ್ನಿಸಿದರೆ, ಕ್ಷೆತ್ರದ ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು, ಸರಕಾರ ತಮ್ಮದೇ ಇದ್ದರೂ ಜನರ ಬಾವನೆಗಳಿಗೆ ಸ್ಪಂದಿಸಲಾಗದ ಜಿಲ್ಲೆಯ ಕೆಲವು ಶಾಸಕರು ಯಲ್ಲಾಪುರ ಶಾಸಕರ ಕಾರ್ಯ ನೋಡಿ ಕಲಿಯಬೇಕು ಎಂದು ಜೋಯಿಡಾ ಜನರು ಹೇಳಿದ್ದಾರೆ.
ಸಂಕಷ್ಟ ಕಾಲಕ್ಕೆ ನೆರವಾಗ ಬೇಕಿದ್ದ ಬರಗಾಲ ವೂ ಇಲ್ಲ ಮೂಲ ಸೌಕರ್ಯವೂ ಇಲ್ಲದ ಜೋಯಿಡಾ ಜನತೆಗೆ ಕಷ್ಟ ವನ್ನು ಪ್ರಧಾನಿ ಯವರಲ್ಲಿ ದೂರಿ ಕೊಳ್ಳುವುದೇ ಬಾಕಿ ಉಳಿದಿದೆ ಎಂದು ಜನತೆ ಅಲವತ್ತು ಕೊಂಡಿದ್ದಾರೆ.
