ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನಲೇನ್ ಶಾಲೆಯಲ್ಲಿ ಸಡಗರ ಸಂಭ್ರಮದಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಚಿಕುಮಾರ ನಾಯರ ನೇರವೇರಿಸಿದರು.ಧ್ವಜಾರೋಹಣ ಕಾರ್ಯಕ್ರಮ ನೇರವೇರಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಶುಭಾಶಯ ಕೋರಿದರು. ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ ಸರ್ ರವರು ಇಂದು ನಾವು ನಮ್ಮ ದೇಶದ 80ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಇಲ್ಲಿ ಸೇರಿದ್ದೇವೆ. ಇದು ನಮ್ಮ ದೇಶಕ್ಕೆ ಬಹಳ ಗೌರವದ ದಿನ.15ನೇ ಆಗಸ್ಟ್ 1947 ರಂದು ನಮ್ಮ ಭಾರತ ದೇಶವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಿತು.
ಸ್ವಾತಂತ್ರ್ಯ ಪಡೆಯುವುದು ಸುಲಭವಿರಲಿಲ್ಲ. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮತ್ತು ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು.ಅವರ ತ್ಯಾಗ ಮತ್ತು ಶ್ರಮವನ್ನು ನಾವು ಸದಾ ನೆನಪಿಟ್ಟುಕೊಳ್ಳಬೇಕು ಮತ್ತು ಅವರಿಗೆ ಕೃತಜ್ಞರಾಗಿರಬೇಕು.ಸ್ವಾತಂತ್ರ್ಯವು ನಮ್ಮ ಮೇಲೆ ದೊಡ್ಡ ಜವಾಬ್ದಾರಿಯನ್ನೂ ಹಾಕಿದೆ. ನಾವು ಎಲ್ಲರೂ ಸೇರಿ ನಮ್ಮ ದೇಶವನ್ನು ಸ್ವಚ್ಛ, ಶಿಸ್ತಿನ ಮತ್ತು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕು. ನಮ್ಮ ಪ್ರಾಮಾಣಿಕತೆ, ಶಿಸ್ತು ಮತ್ತು ಗೌರವದ ಮೌಲ್ಯಗಳನ್ನು ಬೆಳೆಸಬೇಕು. ನಮ್ಮ ದೇಶವನ್ನು ಸ್ವಚ್ಛವಾಗಿಟ್ಟುಕೊಂಡು, ಒಗ್ಗಟ್ಟು ಮತ್ತು ಐಕ್ಯತೆಯಿಂದಿರಲು ಗಮನ ನೀಡಬೇಕು.ವಿದ್ಯಾರ್ಥಿಗಳಾದ ತಾವು ಚೆನ್ನಾಗಿ ಓದುವುದು, ತಮ್ಮ ತಂದೆ-ತಾಯಿ ಮತ್ತು ಶಿಕ್ಷಕರನ್ನು ಗೌರವಿಸುವುದು ಮತ್ತು ನಮ್ಮ ದೇಶದ ಅಭಿವೃದ್ಧಿಯ ಬಗ್ಗೆ ಸದಾ ಯೋಚಿಸುವುದು ನಮ್ಮಕರ್ತವ್ಯವಾಗಿದೆ.ನಮ್ಮ ಭಾರತ ದೇಶ ಸಮೃದ್ಧಿಯಾಗಲಿ, ನಾವು ನಮ್ಮ ಕೈಲಾದಷ್ಟು ಉತ್ತಮ ಕೆಲಸ ಮಾಡೋಣ ಎಂದು ಈ ದಿನ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿಯವರು ಇಂದು ನಾವು ಅತ್ಯಂತ ಹೆಮ್ಮೆಯಿಂದ ಮತ್ತು ಸಂಭ್ರಮದಿಂದ 80 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ.
1947 ನೇ ಇಸವಿ ಆಗಸ್ಟ್ 15 ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು.ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮುಂತಾದ ಅಸಂಖ್ಯಾತ ತ್ಯಾಗಿಗಳ ಹೋರಾಟದ ಫಲವಾಗಿ ಇಂದು ನಾವು ಸ್ವತಂತ್ರ ಭಾರತದಲ್ಲಿ ಉಸಿರಾಡುತ್ತಿದ್ದೇವೆ.ಬ್ರಿಟಿಷರ ದಾಸ್ಯದಿಂದ ನಮ್ಮ ಮಾತೃಭೂಮಿಯನ್ನು ಮುಕ್ತಗೊಳಿಸಲು ಅದೆಷ್ಟೋ ಮಹಾನಾಯಕರು ತಮ್ಮ ಜೀವವನ್ನೇತ್ಯಾಗ ಮಾಡಿದ್ದಾರೆ.ಸ್ವಾತಂತ್ರ್ಯ ಬಂದ ನಂತರ ಕಳೆದ ದಶಕಗಳಲ್ಲಿ ನಮ್ಮ ದೇಶವು ವಿಜ್ಞಾನ, ತಂತ್ರಜ್ಞಾನ, ಕೃಷಿ, ಶಿಕ್ಷಣ, ಬಾಹ್ಯಾಕಾಶ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅಗಾಧವಾದ ಪ್ರಗತಿ ಸಾಧಿಸಿದೆ.ಇಂದು ವಿಶ್ವದ ಮುಂದೆ ಭಾರತವು ಬಲಿಷ್ಠ ರಾಷ್ಟ್ರವಾಗಿ ತಲೆ ಎತ್ತಿ ನಿಂತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವೀರ ಮಹಾಪುರುಷರ ಹಾಗೂ ಮಹಿಳೆಯರ ವೇಷಭೂಷಣ ವಿಶೇಷ ಮೆರಗನ್ನು ನೀಡಿತು. ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು,ಮಕ್ಕಳಿಗೆ ಸಿಹಿಯನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷರು,ಸರ್ವ ಸದಸ್ಯರು, ಪಾಲಕ-ಪೋಷಕರು,ಸಹ ಶಿಕ್ಷಕಿಯರಾದ ನಾಗರತ್ನಾ ಮೊಗೇರ,ಅನಿಸ್ ಫಾತಿಮಾ, ಸುನೀತಾ ಆರ್,ಸಂಜನಾ ಮಿರಾಶಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದಗಳನ್ನು ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿಯವರು ನಡೆಸಿಕೊಟ್ಚರು.
