ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಿಂದೋಳಿ ಕನ್ನಡ ಶಾಲೆಯಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರ ನೇರವೇರಿಸಿ ಎಲ್ಲರಿಗೆ ಶುಭಾಶಯ ಹೇಳಿದರು. ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡರವರು ಎಲ್ಲರಿಗೂ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.1947ರ ಆಗಸ್ಟ್ 15 ರಂದು ನಮ್ಮ ಭಾರತ ದೇಶವು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತವಾಗಿ ಸ್ವಾತಂತ್ರ್ಯವಾಯಿತು. ಈ ಸುದಿನವನ್ನು ನಾವು ಪ್ರತಿ ವರ್ಷ ಅತ್ಯಂತ ಸಡಗರ ಮತ್ತು ಹೆಮ್ಮೆಯಿಂದ ಆಚರಿಸುತ್ತೇವೆ. ಇಂದು ನಾವು ಅನುಭವಿಸುತ್ತಿರುವ ಈ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ದೇಶಭಕ್ತರ ತ್ಯಾಗ ಮತ್ತು ಬಲಿದಾನವಿದೆ.
ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಅವರಂತಹ ಮಹಾನ್ ಚೇತನಗಳ ನಿರಂತರ ಹೋರಾಟದಿಂದ ನಮಗೆ ಈ ಸ್ವಾತಂತ್ರ್ಯ ಲಭಿಸಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಆ ವೀರ ಹೋರಾಟಗಾರರನ್ನು ಗೌರವದಿಂದ ಸ್ಮರಿಸಬೇಕಾಗಿದೆ. ಸ್ವಾತಂತ್ರ್ಯ ಎಂದರೆ ಕೇವಲ ಹಕ್ಕುಗಳಲ್ಲ, ಅದರೊಂದಿಗೆ ನಮಗೆ ದೇಶದ ಕಡೆಗಿನ ಜವಾಬ್ದಾರಿಗಳೂ ಇವೆ. ದೇಶದ ಉತ್ತಮ ಪ್ರಜೆಯಾಗಿ ಬಾಳುವುದು, ಪರಿಸರವನ್ನು ರಕ್ಷಿಸುವುದು, ಸ್ವಚ್ಛತೆಯನ್ನು ಕಾಪಾಡುವುದು ಮತ್ತು ಎಲ್ಲರನ್ನೂ ಸಮಾನವಾಗಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಇಂದಿನ ಯುವ ಪೀಳಿಗೆಯೇ ದೇಶದ ಭವಿಷ್ಯ. ನಾವೆಲ್ಲರೂ ಒಟ್ಟಾಗಿ ಶ್ರಮಿಸಿ ನಮ್ಮ ಭಾರತವನ್ನು ವಿಶ್ವದಲ್ಲೇ ಅತ್ಯುತ್ತಮ ಮತ್ತು ಬಲಿಷ್ಠ ದೇಶವನ್ನಾಗಿ ಮಾಡೋಣ ಎಂದು ಹೇಳಿದರು. ಸಹ ಶಿಕ್ಷಕರಾದ ಆನಂದ ಪಿ.ರವರು ಮಾತನಾಡಿ ನಮ್ಮ ದೇಶದ ಯುವಶಕ್ತಿಯೇ ಇಂದಿನ ಅತಿ ದೊಡ್ಡ ಬಲವಾಗಿದೆ.ಕೇವಲ ದೇಶಭಕ್ತಿಯ ಘೋಷಣೆಗಳನ್ನು ಕೂಗುವುದಷ್ಟೇ ಅಲ್ಲ, ನಮ್ಮ ದೈನಂದಿನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸುವುದು ನಿಜವಾದ ದೇಶಸೇವೆ.ಸಾರ್ವಜನಿಕ ಸ್ವತ್ತುಗಳನ್ನು ಕಾಪಾಡುವುದು, ಪರಿಸರವನ್ನು ಸ್ವಚ್ಛವಾಗಿಡುವುದು ಮತ್ತು ಹಸಿರನ್ನು ಬೆಳೆಸುವುದು ನಮ್ಮೆಲ್ಲರ ಹೊಣೆ.ನಾಳಿನ ಸದೃಢ ಮತ್ತು ನವ ಭಾರತದ ನಿರ್ಮಾಣಕ್ಕಾಗಿ ನಾವೆಲ್ಲರೂ ಇಂದು ಒಗ್ಗಟ್ಟಿನಿಂದ ಶ್ರಮಿಸೋಣ.ನಮ್ಮ ದೇಶದ ಉನ್ನತಿಗಾಗಿ ದುಡಿಯುವ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು. ಶಾಲೆಯ ವಿದ್ಯಾರ್ಥಿಗಳಿಂದ ದೇಶ ಭಕ್ತಿಯ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಇದೇ ಸಂದರ್ಭದಲ್ಲಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು ಹಾಗೂ ತಾಲೂಕು ಮಟ್ಟದ ಕ್ರೀಡೆಗೆ ಶುಭ ಹಾರೈಸಲಾಯಿತು.
ಧ್ವಜಾರೋಹಣ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ತನುಜಾ ಮಸೂರಕರ,ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ನಾಗೇಶ ಕಾಪೋಲಕರ,ಸರ್ವ ಸದಸ್ಯರು, ಪಾಲಕ-ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿಯಾದ ವಿದ್ಯಾ ಮೇಡಂ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಹಳೆಯ ವಿದ್ಯಾರ್ಥಿಗಳಾದ ನಿವೇದಿತಾ ಮಿರಾಶಿ,ಇನ್ನುಳಿದ ವಿದ್ಯಾರ್ಥಿಗಳು ಸಹಕಾರ ನೀಡಿದರು. ಕೊನೆಯಲ್ಲಿ ಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು.
