ಸುದ್ದಿ ಕನ್ನಡ ವಾರ್ತೆ
ಶಿರಸಿ: ಮನುಷ್ಯನ ಜೀವನವು ಕೇವಲ ಲೌಕಿಕ ಸುಖ-ಭೋಗಗಳಿಗೆ ಸೀಮಿತವಾಗಿರದೆ, ಆಧ್ಯಾತ್ಮಿಕ ಚಿಂತನೆ, ಧರ್ಮ ಮತ್ತು ಸದಾಚಾರದ ಹಾದಿಯಲ್ಲಿ ಸಾಗಿದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಜಗದ್ಗುರು ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಚಾತುರ್ಮಾಸ್ಯ ಅಂಗವಾಗಿ ಭಂಡಾರಿ ಸಮಾಜದ ವತಿಯಿಂದ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಮಾನವನಿಗೆ ದೊರೆತಿರುವ ಆಯುಷ್ಯ ಸೀಮಿತವಾಗಿದ್ದು, ಹರಿದು ಹೋದ ನದಿಯ ನೀರು ಹಾಗೂ ಕಳೆದ ಸಮಯ ಎಂದಿಗೂ ಮರಳಿ ಬರುವುದಿಲ್ಲ. ಆದ್ದರಿಂದ ಅಮೂಲ್ಯವಾದ ಮಾನವ ಜನ್ಮವನ್ನು ವ್ಯರ್ಥ ಮಾಡದೆ ಸತ್ಕಾರ್ಯ, ಧರ್ಮಾಚರಣೆ ಹಾಗೂ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಜೀವನದಲ್ಲಿ ಎದುರಾಗುವ ಸುಖ-ದುಃಖ, ರೋಗ-ರುಜಿನ, ಜನನ-ಮರಣ ಸೇರಿದಂತೆ ಎಲ್ಲವೂ ಪ್ರಾರಬ್ಧ ಕರ್ಮದ ಫಲಗಳಾಗಿವೆ. ಸಂಕಷ್ಟಗಳು ಎದುರಾದಾಗ ದೇವರನ್ನು ದೂಷಿಸುವ ಬದಲು ತಾಳ್ಮೆಯಿಂದ ಸ್ವೀಕರಿಸಿ, ಭಕ್ತಿಯಿಂದ ಬದುಕಿದಾಗ ಮನಸ್ಸಿಗೆ ಶಾಂತಿ ಹಾಗೂ ಬದುಕಿಗೆ ಧೈರ್ಯ ದೊರೆಯುತ್ತದೆ ಎಂದು ಹೇಳಿದರು. ಪ್ರತಿದಿನ ಬೆಳಿಗ್ಗೆ ಮತ್ತು ವಿಶೇಷವಾಗಿ ಸಂಜೆಯ ವೇಳೆಯಲ್ಲಿ ಮನೆಯಲ್ಲಿ ಭಕ್ತಿ, ದೇವರ ಧ್ಯಾನ, ಭಜನೆ ಹಾಗೂ ಶ್ಲೋಕ ಪಠಣದ ವಾತಾವರಣ ನಿರ್ಮಿಸಬೇಕು. ಇದರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಧಾರ್ಮಿಕ ಮೌಲ್ಯಗಳು ಹಾಗೂ ಭಾರತೀಯ ಸಂಸ್ಕೃತಿಯ ಅರಿವು ಬೆಳೆಯುತ್ತದೆ ಎಂದು ಸಲಹೆ ನೀಡಿದರು.
ಸಂಗೀತಕ್ಕೆ ದಿವ್ಯ ಶಕ್ತಿಯಿದ್ದು, ಅದು ಮನುಷ್ಯರು ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳನ್ನೂ ತನ್ನತ್ತ ಆಕರ್ಷಿಸುವ ಸಾಮರ್ಥ್ಯ ಹೊಂದಿದೆ. ದೇವಾಲಯ ಹಾಗೂ ಮಠಗಳಲ್ಲಿ ನಡೆಯುವ ಪಂಚವಾದ್ಯ ಸೇವೆ ದೇವರಿಗೆ ಸಲ್ಲಿಸುವ ಅತ್ಯುನ್ನತ ಸೇವೆಯಾಗಿದ್ದು, ಇಂತಹ ಪರಂಪರೆಯ ಸೇವೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು.
ಮಠ-ಮಾನ್ಯಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಸಂಘಟಿಸುವ ಕೇಂದ್ರಗಳಾಗಿದ್ದು, ಪರಸ್ಪರ ಪ್ರೀತಿ, ಸಹೋದರತೆ ಮತ್ತು ಸಹಕಾರದ ಮನೋಭಾವವನ್ನು ಬೆಳೆಸುತ್ತವೆ ಎಂದರು. ಈ ಸಂದರ್ಭದಲ್ಲಿಭಂಡಾರಿ ಸಮಾಜದ ವತಿಯಿಂದ ಉಭಯ ಶ್ರೀಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿಗಳಿಗೆ ಚಾತುರ್ಮಾಸ್ಯ ಸೇವೆ ಸಲ್ಲಿಸಲಾಯಿತು.
