ಸುದ್ದಿ ಕನ್ನಡ ವಾರ್ತೆ
ಶಿರಸಿ: ಸೂಕ್ಷ್ಮವಾದ ಅಜ್ಞಾನದ ನಿವಾರಣೆಗೆ ಸೂಕ್ಷ್ಮವಾದ ಜ್ಞಾನ ಅವಶ್ಯಕ. ಇಂಥ ಸೂಕ್ಷ್ಮ ಜ್ಞಾನ ನೀಡುವವನೇ ಗುರು ಎಂದು ಸೋಂದಾ ಸ್ವರ್ಣವಲ್ಲೀ ಮಠ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಬುಧವಾರ ಅವರು ಸ್ವರ್ಣವಲ್ಲಿಯಲ್ಲಿ ಸಂಕಲ್ಪಿತ 36ನೇ ಚಾತುರ್ಮಾಸ್ಯ ವ್ರತಾಚರಣೆ ಸಂಕಲ್ಪದ ಧರ್ಮಸಭೆಯಲ್ಲಿ ಸಾನಿಧ್ಯ ನೀಡಿ ಆಶೀರ್ವಚನ ನೀಡಿದರು.
ಗುರು ಎಂದರೆ ಅಜ್ಞಾನವನ್ನು ನಿವಾರಿಸುವವನು. ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು. ಗುರು ಭಕ್ತಿಯು ಜಾಗೃತಗೊಳ್ಳುವ ದಿನವೇ ವ್ಯಾಸಪೂರ್ಣಿಮೆ ಎಂದರು.
ಗುರು ಪೂರ್ಣಿಮೆ ಎಂದರೆ ವ್ಯಾಸ ಪೂರ್ಣಿಮೆ. ವ್ಯಾಸ ಮಹರ್ಷಿಗೆ ಮೊದಲ ಪೂಜೆ.
ಬ್ರಹ್ಮ-ವಿಷ್ಣು-ಮಹೇಶ್ವರರು ಗುರು ಪರಂಪರೆಯಲ್ಲಿ ಆದಿಯಾಗಿ ನಿಲ್ಲುತ್ತಾರೆ.
ನಾಲ್ಕು ಪಕ್ಷಗಳ ಕಾಲ ಚಾತುರ್ಮಾಸ್ಯ ಆಚರಣೆ ಬಹುತೇಕ ಮಠಗಳಲ್ಲಿ ನಡೆಯುತ್ತದೆ ಎಂದರು.
ಮಠದ ಕಿರಿಯ ಸ್ವಾಮೀಜಿ ಶ್ರೀ ಆನಂದಭೋದೇಂದ್ರ ಸರಸ್ವತಿ ಸ್ವಾಮೀಜಿ 3ನೇ ಚಾತುರ್ಮಾಸ್ಯ ಸಂಕಲ್ಪಿಸಿ ಆಶೀರ್ವಚನ ನುಡಿದು, ಗುರುಗಳ ಅನುಗ್ರಹ ಆಗಬೇಕು. ಗುರುತತ್ತ್ವ ಮೂರ್ತವೆತ್ತು ನಮ್ಮೆದುರು ಬಂದಿದೆ. ಅವರ ಮಾರ್ಗದರ್ಶನದಲ್ಲಿ ಆಧ್ಯಾತ್ಮ ಸಾಧನೆ ಸಾಗುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿದ ಐಪಿಎಸ್ ಅಧಿಕಾರಿ ಡಿಜಿಪಿ ನರಸಿಂಹ ಕೋಮಾರ, ಸಣ್ಣ ಊರಿನಿಂದ ದೊಡ್ಡ ಕನಸಿನೊಂದಿಗೆ ಊರು ಬಿಟ್ಟೆವು. ಗುರುಗಳ ಶಕ್ತಿಯಿಂದ ಈ ಸಾಧನೆ ಸಾಧ್ಯವಾಗಿದೆ. ಭೂಮಿ ಭಾರವಾಗದೇ ಸಾಧನೆ ಮಾಡಬೇಕು ಎಂದು ತಂದೆ ಹೇಳುತ್ತಿದ್ದರು. ಆ ಮಾತು ಸಾಧನೆಗೆ ಪ್ರೇರಣೆ ಆಗಿದೆ ಎಂದರು.
ಪಶ್ಚಿಮ ಘಟ್ಟದ ಪರಿಸರ ಉಳಿಸಲು, ನದಿ ಜೋಡಣೆ ಸೇರಿದಂತೆ ಅನೇಕ ಅಪಾಯಕಾರಿ ಯೋಜನೆ ವಿರೋಧಿಸಿ ಉಭಯ ಸರ್ಕಾರಕ್ಕೆ ಪತ್ರ ಚಳುವಳಿಯನ್ನು ಚಾತುರ್ಮಾಸ್ಯದ ಎಲ್ಲದಿನವೂ ನಡೆಸಲಾಗುತ್ತದೆ. ಆಗಮಿಸಿದ ಶಿಷ್ಯರು ಇದರಲ್ಲಿ ಭಾಗವಹಿಸಬೇಕು ಎಂದು
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಆಶೀಸರ ಮನವಿ ಮಾಡಿದರು.
ಮಠದ ಪುರೋಹಿತ ನರಸಿಂಹ ಜೋಶಿ, ಇಂಥ ಪುಣ್ಯ ಕಾಲದಲ್ಲಿ ಸನ್ಮಾನ ಪಡೆಯುತ್ತಿರುವ ವೇಳೆ ಪುಣ್ಯದ ಕ್ಷಣ ಎಂದರು. ಹಿರಿಯ ಸಾಹಿತಿ ವನರಾಗ ಶರ್ಮಾ, ಮಠದ ಪತ್ರಿಕೆಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿದ್ದಕ್ಕೆ, ಸಹಕಾರ ನೀಡಿದ ಎಲ್ಲರಿಗೆ ಈ ಸನ್ಮಾನ ಅರ್ಪಿಸುವೆ. ಸ್ವರ್ಣವಲ್ಲೀ ಶ್ರೀಗಳು ಶಿಷ್ಯ ವಾತ್ಸಲ್ಯ ಎಂದೂ ಮರೆಯಲಾಗದು ಎಂದರು.
ರಾಜರಾಜೇಶ್ವರಿ ಮಹಾ ಪಾಠಶಾಲೆ ವಿದ್ಯಾರ್ಥಿಗಳು ವೇದ ಘೋಷ ಮಾಡಿದರು. ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ ಸ್ವಾಗತಿಸಿದರು. ವಿ.ಶಂಕರ ಭಟ್ಟ, ಗೀತಾ ಹೆಗಡೆ, ಕೆ.ವಿ.ಭಟ್ಟ ಅವರು ಸನ್ಮಾನ ಪತ್ರ ವಾಚಿಸಿದರು. ನದಿ ತಿರುವಿನ ಜಾಗೃತಿ ಅಭಿಯಾನದ ಕುರಿತು ಅನಂತ ಆಶೀಸರ ಮಾತನಾಡಿದರು.ಡಾ.ಮಹಾಬಲೇಶ್ವರ ಭಟ್ಟ ಕಿರುಕುಂಭತ್ತಿ ನಿರ್ವಹಿಸಿದರು. ಜಿ.ವಿ.ಹೆಗಡೆ ಗೊಡ್ಡೇಮನೆ ವಂದಿಸಿದರು. ಇದೇ ವೇಳೆ ಹಲವು ಗ್ರಂಥಗಳ ಲೋಕಾರ್ಪಣೆ ನಡೆಯಿತು.
