ಸುದ್ದಿ ಕನ್ನಡ ವಾರ್ತೆ
ಶಿರಸಿ: ಸಂಘಟನಾತ್ಮಕವಾಗಿ ಪಕ್ಷವನ್ನು ಬಲಗೊಳಿಸುವ ದೃಷ್ಟಿಯಿಂದ ತನ್ನ ಕಾರ್ಯಕರ್ತರಿಗೆ ಭಾರತೀಯ ಜನತಾ ಪಕ್ಷವು ಪ್ರಶಿಕ್ಷಣ ವರ್ಗಗಳನ್ನು ನಡೆಸಿಕೊಂಡು ಬಂದಿದ್ದು, ಇದೀಗ ನೂತನ ರಾಷ್ಟ್ರಾಧ್ಯಕ್ಷ ನಿತೀನ್ ನಬಿನ್ ಆಶಯದಂತೆ ದೇಶಾದ್ಯಂತ ವಿವಿಧ ಹಂತದಲ್ಲಿ ಬಿಜೆಪಿ ತನ್ನ ಕಾರ್ಯಕರ್ತರಿಗಾಗಿ ಪ್ರಶಿಕ್ಷಣ ವರ್ಗಗಳನ್ನು ನಡೆಸುತ್ತಿದೆ. ಅದರ ಭಾಗವಾಗಿ ಶಿರಸಿ ಗ್ರಾಮೀಣ ಮಂಡಲದ ಪಂಡಿತ್ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ ಏ.7,8 ರಂದು ತಾಲೂಕಿನ ಲಂಡಕನಹಳ್ಳಿಯ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ನಡೆಯಲಿದೆ.
ಏ.7, ಮಂಗಳವಾರ ಸಂಜೆ 5 ಗಂಟೆಗೆ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಈ ಮಹಾ ಪ್ರಶಿಕ್ಷಣ ವರ್ಗಕ್ಕೆ ಚಾಲನೆ ನೀಡಲಿದ್ದು, ಎರಡು ದಿನಗಳ ಕಾಲ ವಿವಿಧ ಆಯಾಮದಲ್ಲಿ ಕಾರ್ಯಕರ್ತರು ಪ್ರಶಿಕ್ಷಣ ಪಡೆಯಲಿದ್ದು, ಪಕ್ಷದ ಹಿರಿಯ ನಾಯಕರು ಈ ವರ್ಗಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ಮಾರ್ಗದರ್ಶನ ಮಾಡಲಿದ್ದಾರೆ. ಏ.8 ರ ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದ್ದು, ವಿಧಾನ ಪರಿಷತ್ ಶಾಸಕ ಶಾಂತಾರಾಮ ಸಿದ್ದಿ ಸಮಾರೋಪ ಅವಧಿ ತೆಗೆದುಕೊಳ್ಳಲಿದ್ದಾರೆ. ಈ ಕಾರ್ಯಕರ್ತರ ಪ್ರಶಿಕ್ಷಣ ವರ್ಗವು ಕಾರ್ಯಕರ್ತರಲ್ಲಿ ಪಕ್ಷದ ಸಂಘಟನೆ ದೃಷ್ಟಿಯಿಂದ ಇನ್ನಷ್ಟು ಹೊಸ ಹುರುಪನ್ನು, ಬಲವನ್ನು ತುಂಬಲಿದೆ ಎಂದು ಈ ಪ್ರಶಿಕ್ಷಣ ವರ್ಗದ ಸಂಚಾಲಕ ಅನಂತಮೂರ್ತಿ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
