ಸುದ್ದಿ ಕನ್ನಡ ವಾರ್ತೆ

ಬೆಂಗಳೂರು:ಏಪ್ರಿಲ್ 5, 2026 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 43 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟಿಮ್ ಡೇವಿಡ್ (70*), ದೇವದತ್ ಪಡಿಕ್ಕಲ್ (50) ಮತ್ತು ರಜತ್ ಪಾಟಿದಾರ್ (48*) ಅಬ್ಬರದಿಂದ RCB 250/3 ರನ್‌ಗಳ ಬೃಹತ್ ಮೊತ್ತ ಪೇರಿಸಿದರೆ, CSK 207 ರನ್‌ಗಳಿಗೆ ಸೀಮಿತವಾಯಿತು.ಈ ಸೋಲಿನ ಹೊರತಾಗಿಯೂ ಸಿಎಸ್‌ಕೆ ಭರ್ಜರಿ ವಿಶ್ವ ದಾಖಲೆ ನಿರ್ಮಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 11ನೇ ಪಂದ್ಯದಲ್ಲಿ ಬರೋಬ್ಬರಿ 30 ಸಿಕ್ಸರ್‌ಗಳು ಮೂಡಿಬಂದಿವೆ. ಈ ಮೂವತ್ತು ಸಿಕ್ಸರ್‌ಗಳಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ 19 ಸಿಕ್ಸ್ ಬಾರಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ (CSK) ಕೇವಲ 11 ಸಿಕ್ಸ್ ಸಿಡಿಸಿದ್ದರು. ಇದಾಗ್ಯೂ ಸಿಎಸ್‌ಕೆ ತಂಡದ ಹೆಸರಿಗೆ ವಿಶೇಷ ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್ ವೊಂದರಲ್ಲಿ 9 ಬ್ಯಾಟರ್‌ಗಳು ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನದಾಗಿಸಿಕೊಂಡಿದೆ. ಅಂದರೆ ಆರ್‌ಸಿಬಿ ವಿರುದ್ಧ ಸಿಎಸ್‌ಕೆ ತಂಡದ 9 ಬ್ಯಾಟರ್‌ಗಳು ಸಿಕ್ಸ್ ಬಾರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಯಾವುದೇ ತಂಡಕ್ಕೂ ಸಾಧ್ಯವಾಗದ ಅಪರೂಪದ ದಾಖಲೆಯೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ನಿರ್ಮಿಸಿದೆ.