ಸುದ್ದಿ ಕನ್ನಡ ವಾರ್ತೆ
ಲೇಹ್ (ಲಡಾಖ್): ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಲಡಾಖ್‌ನ ಲೇಹ್‌ನಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ಗುರುಗಳಾದ ಪರಮಪೂಜ್ಯ ದಲಾಯಿ ಲಾಮಾ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಅವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದ ಸಂಸದರು, ವಿಶ್ವ ಶಾಂತಿ, ಕರುಣೆ, ಅಹಿಂಸೆ ಹಾಗೂ ಸೌಹಾರ್ದತೆಯ ಸಂದೇಶವನ್ನು ಜಗತ್ತಿಗೆ ಸಾರುತ್ತಿರುವ ದಲಾಯಿ ಲಾಮಾ ಅವರ ಸೇವೆಯನ್ನು ಶ್ಲಾಘಿಸಿದರು.
ಭೇಟಿಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, “ವಿಶ್ವ ಶಾಂತಿ ಹಾಗೂ ಸೌಹಾರ್ದತೆಯ ಮೂರ್ತಿ ಸ್ವರೂಪರಾಗಿರುವ ಪರಮಪೂಜ್ಯ ದಲಾಯಿ ಲಾಮಾ ಅವರನ್ನು ಲೇಹ್‌ನಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದ ಕ್ಷಣಗಳು ನನ್ನ ಜೀವನದ ಅತ್ಯಂತ ಸ್ಮರಣೀಯ ಅನುಭವಗಳಾಗಿವೆ. ಅವರ ಕರುಣೆ ಮತ್ತು ಅಹಿಂಸೆಯ ಸಂದೇಶವು ಇಡೀ ಮಾನವಕುಲಕ್ಕೆ ಸದಾ ಪ್ರೇರಣೆಯಾಗಿದೆ” ಎಂದು ತಿಳಿಸಿದ್ದಾರೆ.
