ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಪಟ್ಟಣದ ಪ್ರತಿಷ್ಠಿತ ತಾಲೂಕು ಮಾರಾಟ ಸಹಕಾರಿ ಸಂಘ (ಟಿಎಂಎಸ್) ಅಧ್ಯಕ್ಷರಾಗಿ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹಾಗೂ ಉಪಾಧ್ಯಕ್ಷರಾಗಿ ನರಸಿಂಹ ಕೋಣೆಮನೆ ಅವರು ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಕಾರ್ಯಾಲಯದಲ್ಲಿ ಮಂಗಳವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಡಿಸೋಜಾ ಕಾರ್ಯನಿರ್ವಹಿಸಿದರು, ಮುಖ್ಯ ಕಾರ್ಯನಿರ್ವಾಹಕ ಸುದೀಪ ಹೆಗಡೆ ಅವರು ಪ್ರಕ್ರಿಯೆಗೆ ಸಹಕರಿಸಿದರು.
ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವ ಕೃತಜ್ಞತಾ ಸಭೆಯನ್ನು ಜುಲೈ 18 ರಂದು ಮಧ್ಯಾಹ್ನ 3:30 ಕ್ಕೆ ಟಿಎಂಎಸ್ ಸಂಸ್ಥೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಹಲವು ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ ಎಂದು ನೂತನ ಅಧ್ಯಕ್ಷರು ತಿಳಿಸಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಸೇರಿದಂತೆ ಅನೇಕ ಗಣ್ಯರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಸುಬ್ರಹ್ಮಣ್ಯ ಬೋಳ್ಮನೆ, ಮಂಜುನಾಥ ಹೆಗಡೆ ಜಡ್ಡಿಗದ್ದೆ, ಜಿ.ವಿ. ಹೆಗಡೆ ಹಿತ್ಲಳ್ಳಿ, ಅಪ್ಪು ಆಚಾರಿ, ಸಾಲು ಸಿದ್ಧಿ, ಸೀತಾ ಮೆಣಸುಮನೆ, ಸೌಮ್ಯಾ ಕಿಚ್ಚುಪಾಲ ರಾಜೇಂದ್ರ ಪ್ರಸಾದ್ ಸೇರಿದಂತೆ ಪ್ರಮುಖರು ಇದ್ದರು.
