ಸುದ್ದಿ ಕನ್ನಡ ವಾರ್ತೆ
​ದಾಂಡೇಲಿ: ತಾಲೂಕಿನ ಅಂಬಿಕಾನಗರ ಪಾವರ್ ಹೌಸ್ ಸಮೀಪ ಶನಿವಾರ ಬೆಳಗ್ಗೆ ಕರಡಿಯೊಂದು ರಸ್ತೆ ಮೇಲೆ ರಾಜಾರೋಷವಾಗಿ ಓಡಾಡಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಶನಿವಾರ ಬೆಳಗ್ಗೆ ಸುಮಾರು 6 ಗಂಟೆ ವೇಳೆಗೆ ಕರಡಿಯೊಂದು ರಸ್ತೆ ದಾಟುತ್ತಿದ್ದ ವೇಳೆ ಎದುರಿನಿಂದ ವಾಹನ ಬರುತ್ತಿರುವುದನ್ನು ಗಮನಿಸಿದೆ. ವಾಹನವನ್ನು ಕಂಡ ತಕ್ಷಣ ಕರಡಿ ತಿರುಗಿ ರಸ್ತೆ ಮೇಲೆಯೇ ವೇಗವಾಗಿ ಓಡತೊಡಗಿತು. ಕೆಲಕಾಲ ರಸ್ತೆ ಮೇಲೆಯ ಓಡಿದ ಬಳಿಕ ಸಮೀಪದ ಅರಣ್ಯ ಪ್ರದೇಶದತ್ತ ತೆರಳಿದೆ.
​ಈ ಅಪರೂಪದ ದೃಶ್ಯವನ್ನು ಅಲ್ಲಿಂದ ಸಾಗುತ್ತಿದ್ದ ವಾಹನ ಸವಾರರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಕರಡಿ ರಸ್ತೆ ಮೇಲೆ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರ ನಡುವೆ ಚರ್ಚೆಗೆ ಗ್ರಾಸವಾಗಿದೆ.

​ಅಂಬಿಕಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ವನ್ಯಜೀವಿಗಳ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವನ್ಯಜೀವಿಗಳು ರಸ್ತೆ ಮತ್ತು ವಸತಿ ಪ್ರದೇಶಗಳತ್ತ ಬರುತ್ತಿರುವ ಕಾರಣ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.

​ಅರಣ್ಯ ಪ್ರದೇಶಗಳ ಸಮೀಪ ವಾಹನ ಚಲಾಯಿಸುವವರು ವೇಗ ನಿಯಂತ್ರಣ ಪಾಲಿಸುವುದು ಹಾಗೂ ವನ್ಯಜೀವಿಗಳು ಕಂಡುಬಂದಲ್ಲಿ ಅವುಗಳಿಗೆ ಯಾವುದೇ ರೀತಿಯ ತೊಂದರೆ ನೀಡದೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.