Banner Ad

ಸುದ್ದಿ ಕನ್ನಡ ವಾರ್ತೆ
ಕಾರವಾರ: ಇಲ್ಲಿನ ವಿನಾಯಕ ನಾಯ್ಕ ಚೆಂಡಿಯಾ ನೇತೃತ್ವದ ‘ಬ್ಲಡ್ ಡೋನರ್ಸ್ ಕಾರವಾರ’ ತಂಡವು ರಾತ್ರಿ ವೇಳೆಯ ತುರ್ತಾಗಿ ನೆರವಾಗಿ ಗರ್ಭಿಣಿಯ ಜೀವ ರಕ್ಷಣೆ ಮಾಡುವಲ್ಲಿ ನೆರವಾಗಿದ್ದು ಪ್ರಶಂಸೆಗೆ ಕಾರಣವಾಗಿದೆ.
​ಬುಧವಾರ ರಾತ್ರಿ ಹೊನ್ನಾವರ ಮೂಲದ ಗರ್ಭಿಣಿ ಮಹಿಳೆಯೋರ್ವಳಿಗೆ ಗರ್ಭಪಾತವಾಗಿ ಅತೀ ತುರ್ತು ಸಂದರ್ಭದಲ್ಲಿ ‘ಎ ನೆಗೆಟಿವ್’ ರಕ್ತದ ಅವಶ್ಯಕತೆ ಉಂಟಾಗಿತ್ತು. ರಕ್ತ ಸಿಗುವ ವರೆಗೂ ಮಹಿಳೆಗೆ ಮುಂದಿನ ಚಿಕಿತ್ಸೆ ನೀಡಲು ಸಾಧ್ಯವಿಲ್ಲದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದರಿಂದ ಆತಂಕಗೊಂಡ ಮಹಿಳೆಯ ಕುಟುಂಬಸ್ಥರು ತಕ್ಷಣ ‘ಬ್ಲಡ್ ಡೋನರ್ಸ್’ ಮುಖ್ಯಸ್ಥ ವಿನಾಯಕ ನಾಯ್ಕ ಚೆಂಡಿಯಾ ಅವರಿಗೆ ಕರೆ ಮಾಡಿ ರಕ್ತಕ್ಕಾಗಿ ಮನವಿ ಮಾಡಿದ್ದರು. ಮನವಿಗೆ ತಕ್ಷಣ ಸ್ಪಂದಿಸಿದ ವಿನಾಯಕ ಅವರು, ತಡರಾತ್ರಿಯೆನ್ನದೆ ತಮ್ಮ ತಂಡದ ಸದಸ್ಯರಾದ ಪ್ರವೀಣ ಹರಿಕಂತ್ರ ಚಿತ್ತಾಕುಲ ಹಾಗೂ ಪ್ರಸಾದ ಬಾಂದೇಕರ ಕಿನ್ನರ ಅವರನ್ನು ಜಿಲ್ಲಾಸ್ಪತ್ರೆಗೆ ಕರೆಸಿದ್ದಾರೆ.

Banner Ad

ಸಕಾಲದಲ್ಲಿ ರಕ್ತದಾನ ಮಾಡುವ ಮೂಲಕ ಮಹಿಳೆಯ ಜೀವ ಉಳಿಸುವಲ್ಲಿ ನೆರವಾದ ಈ ರಕ್ತದಾನಿಗಳಿಗೆ ಮಹಿಳೆಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.‘ಬ್ಲಡ್ ಡೋನರ್ಸ್ ಕಾರವಾರ’ ತಂಡವು ಕಳೆದ 15 ದಿನಗಳಲ್ಲಿ ಅತ್ಯಂತ ವಿರಳವಾದ ಎ ನೆಗೆಟಿವ್ ಗ್ರೂಪ್‌ನ 8 ಯೂನಿಟ್ ರಕ್ತವನ್ನು ತುರ್ತು ಸಂದರ್ಭಗಳಲ್ಲಿ ಒದಗಿಸಿ, ಹಲವು ಅಮೂಲ್ಯ ಜೀವಗಳನ್ನು ಉಳಿಸುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

​ತುರ್ತು ಸಂದರ್ಭಗಳಲ್ಲಿ ಕಾರವಾರ ಜಿಲ್ಲಾ ಆಸ್ಪತ್ರೆಯ ರಕ್ತದಾನ ಕೇಂದ್ರಕ್ಕೆ ಧಾವಿಸಿ ರಕ್ತದಾನ ಮಾಡಿದ ರಕ್ತದಾನಿಗಳಾದ ಸಂತೋಷ ನಾಯಕ ಅಂಕೋಲಾ, ರಾಜೇಶ ಖಾರ್ವಿ ಬೈತ್ಕೋಲ್, ವಿನೋದ ನಾಯ್ಕ ಅಂಕೋಲಾ, ಪ್ರವೀಣ ಗುನಗಿ ಕಾರವಾರ, ಜಗದೀಶ ರಾಥೋಡ, ರಾಜೇಶ ಹರಿಕಂತ್ರ ಹಾರವಾಡ, ಪ್ರವೀಣ ಹರಿಕಂತ್ರ ಚಿತ್ತಾಕುಲ ಹಾಗೂ ಪ್ರಸಾದ ಪೆಡ್ನೇಕರ ಕಿನ್ನರ ಅವರ ಮಾನವೀಯ ಸೇವೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Banner Ad