ಸುದ್ದಿ ಕನ್ನಡ ವಾರ್ತೆ
ಸಿದ್ದಾಪುರ: ತಾಲೂಕಿನ ತ್ಯಾಗಲಿ ಗ್ರಾಮದ ಮಾಲ್ಕಿ ಜಮೀನೊಂದರಲ್ಲಿ ಕಡವೆಯೊಂದು ನಿಗೂಢವಾಗಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಸರ್ವೆ ನಂಬರ್ 160ರ ಜಾಗದಲ್ಲಿ ಸರಿಸುಮಾರು 2 ವರ್ಷ ಪ್ರಾಯದ ಹೆಣ್ಣು ಕಡವೆಯ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ.
ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಹೆಚ್. ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಎಸ್. ನಿಂಗಾಣಿ ಅವರ ಮಾರ್ಗದರ್ಶನದಲ್ಲಿ, ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ ಎಲ್. ನಾಯ್ಕ ನೇತೃತ್ವದ ವಿಶೇಷ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಸಾವಿನ ಹಿಂದಿನ ನಿಖರ ಕಾರಣವನ್ನು ಪತ್ತೆಹಚ್ಚಲು ಮತ್ತು ಸಂಶಯಾಸ್ಪದ ಅಂಶಗಳನ್ನು ಕಲೆ ಹಾಕಲು ದಾಂಡೇಲಿಯ ವನ್ಯಜೀವಿ ಸಂಶೋಧನೆ ಮತ್ತು ತರಬೇತಿ ಕೇಂದ್ರದ ವಿಧಿವಿಜ್ಞಾನ ತಜ್ಞರು ಹಾಗೂ ಕೆಟಿಆರ್ ವಿಭಾಗದ ಶ್ವಾನದಳವನ್ನು ಸ್ಥಳಕ್ಕೆ ಕರೆಸಿ ತಪಾಸಣೆ ಕೈಗೊಳ್ಳಲಾಗಿದೆ.
ಮೃತ ಕಡವೆಯ ಮರಣೋತ್ತರ ಪರೀಕ್ಷೆಯನ್ನು ಪಶುವೈದ್ಯಾಧಿಕಾರಿ ಡಾ. ಪ್ರಶಾಂತ ನೆರವೇರಿಸಿದ್ದಾರೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೆಕರ, ತ್ಯಾಗಲಿ ಗಸ್ತು ಅರಣ್ಯ ಪಾಲಕ ರೋಹಿತ ನಾಯ್ಕ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕಿನಿಂದ ಸಾಗಿದ್ದು, ಆರೋಪಿಗಳ ಪತ್ತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
