ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕುಗ್ರಾಮವಾದ ವಾಗೇಲಿ ಗ್ರಾಮಕ್ಕೆ ಸ್ಥಗಿತಗೊಂಡಿದ್ದ ಬಸ್‌ ಸೇವೆ ಮತ್ತೆ ಪುನರಾರಂಭಗೊಂಡಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ. ರಸ್ತೆ ಹದಗೆಟ್ಟಿದೆ ಎಂಬ ಕಾರಣದಿಂದ ಕೆಲ ದಿನಗಳ ಹಿಂದೆ ವಸತಿ ಹಾಗೂ ಮಧ್ಯಾಹ್ನದ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಇದರಿಂದ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಬಸ್ ಸೇವೆ ಪುನರಾರಂಭಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದವರು ಹಾಗೂ ಗ್ರಾಮಸ್ಥರು ತಹಶೀಲ್ದಾರ್ ಜೋಯಿಡಾರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಜನರ ಬೇಡಿಕೆಗೆ ಸ್ಪಂದಿಸಿದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಾರಿಗೆ ಇಲಾಖೆಯು ವಾಗೇಲಿ ಮಾರ್ಗದಲ್ಲಿ ಬಸ್‌ ಸಂಚಾರವನ್ನು ಪುನರಾರಂಭಿಸಿದ್ದು, ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಸೇವೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಗ್ರಾಮೀಣ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಸ್‌ ಸೇವೆ ಪುನರಾರಂಭಿಸಲು ಸಹಕರಿಸಿದ ಅಧಿಕಾರಿಗಳು, ಸಾರಿಗೆ ಇಲಾಖೆ ಹಾಗೂ ಹೋರಾಟದಲ್ಲಿ ಭಾಗವಹಿಸಿದ ಎಲ್ಲರಿಗೂ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.