ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ತಾಲೂಕಿನ ಪುಣ್ಯಕ್ಷೇತ್ರ ಉಳವಿ ಯಲ್ಲಿ ಹಳೆ ವಿದ್ಯಾರ್ಥಿಗಳು ಸೇರಿ ಗುರುವಂದನೆಯನ್ನು ಸಂಭ್ರಮದಿಂದ ನಡೆಸಿದರು. ಶ್ರೀ ಚೆನ್ನಬಸವೇಶ್ವರ ಪ್ರೌಢ ಶಾಲೆ ಆರಂಭವಾದಂದಿನಿಂದ ಇದು ವರೆಗೆ ಸಾವಿರಾರು ವಿದ್ಯಾರ್ಥಿಗಳು ಕಲಿತಿದ್ದಾರೆ.

ಅದರಲ್ಲಿ ಹಲವಾರು ಆಗಿನ ವಿದ್ಯಾರ್ಥಿಗಳು ಈಗ ಉತ್ತಮ ಅಧಿಕಾರಿಗಳು ಉತ್ತಮ ವ್ಯವಹಾರಸ್ಥರು ಆಗುವ ಮೂಲಕ ಪ್ರೌಢ ಶಾಲೆಯಲ್ಲಿ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಅವರೆಲ್ಲರ ಪ್ರಯತ್ನ ಮತ್ತು ಉಳವಿಯಲ್ಲಿ ಕಲಿತ ಕೋಲಾರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕರಾದ ಮಾಧವ ಗಾಂವಕಾರ ರವರ ಅವಿರತ ಪ್ರಯತ್ನದ ಫಲವಾಗಿ ಈ ಗುರುವಂದನಾ ಕಾರ್ಯಕ್ರಮ ಯಶಸ್ವಿಯಾಯಿತು.


ಈ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಕುರಿತು ವಿವರವಾಗಿ ಮಾತನಾಡಿದ ಸರಕಾರಿ ಅಭಿಯೋಜಕ ಮಾಧವ ಗಾಂವಕಾರ ಗುರುಗಳು ನಮಗೆ ಕೊಟ್ಟ ನಿಸ್ವಾರ್ಥ ಪ್ರೀತಿಯ ಶಿಕ್ಷಣವೇ ನಾವಿಂದು ಈ ಮಟ್ಟಕ್ಕೆ ತಲುಪಲು ಕಾರಣ ಹಾಗಾಗಿ ಗುರುಗಳನ್ನು ನಾವು ಸ್ಮರಿಸಲೇ ಬೇಕು ಎಂದರು. ಈ ಸಂದರ್ಭದಲ್ಲಿ ಕಳೆದ 4 ದಶಕಗಳಿಂದ ಕಲಿತ ವಿದ್ಯಾರ್ಥಿಗಳು ಒಂದೆಡೆ ಸೇರಿದ್ದು ಹಲವಾರು ಗೆಳೆಯರು ಮತ್ತು ಹಲವರನ್ನು ಕಾಣಲು ಕಾರಣವಾಯ್ತು . ಈ ಸಂದರ್ಭದಲ್ಲಿ ಸಾಮೂಹಿಕ ಅಭಿಷೇಕ , ಜ್ಯೋತಿ ಪ್ರಜ್ವಲನ ವಾದ್ಯ ಮೇಳಗಳ ನಿನಾದ , ಪುಷ್ಪ ವೃಷ್ಟಿಯೊಂದಿಗೆ ಗುರು ಹಿರಿಯರೊಂದಿಗೆ ಹಳೆಯ ಹೊಸಬರು ವಿದ್ಯಾರ್ಥಿಗಳೆಲ್ಲ ಸೇರಿದ ಮೆರವಣಿಗೆ ಎಲ್ಲವೂ ಹಬ್ಬದಂತೆ ಕಂಗೊಳಿಸಿದವು. ಇದು ಗುರು ಶಿಷ್ಯರ ಪಾವಿತ್ರ್ಯತೆ ಯನ್ನು ಎತ್ತಿ ತೋರಿಸಿತು.

 

ಕಾರ್ಯಕ್ರಮಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದ ಹಲವಾರು ಅಧಿಕಾರಿಗಳು ಸಜ್ಜನರು ವ್ಯಾಪಾರಸ್ತರು ಉಳವಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳೇ ಆಗಿದ್ದರು. ಶ್ರೀ ಕ್ಷೇತ್ರ ಉಳವಿ ದೇವಸ್ಥಾನದ ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲ ಸಹಕಾರ ನೀಡುವ ಮೂಲಕ ಗುರುವಂದನೆ ಮೆರಗನ್ನು ಹೆಚ್ಚಿಸಿದರು.