ಸುದ್ದಿ ಕನ್ನಡ ವಾರ್ತೆ

​ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ, ನೂರಾರು ವರ್ಷಗಳ ಇತಿಹಾಸಪ್ರಸಿದ್ಧ ಹಾಗೂ ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರವಾದ ‘ಮೂರುನಕಟ್ಟೆ’ಯನ್ನು ಭಾನುವಾರ ತಡರಾತ್ರಿ ಸಮಾಜಘಾತಕ ಶಕ್ತಿಗಳು ಏಕಾಏಕಿ ಗುಂಪು ಕಟ್ಟಿಕೊಂಡು ಬಂದು ಧ್ವಂಸಗೊಳಿಸಿರುವುದು ಅತ್ಯಂತ ಹೇಯ, ವಿಕೃತ ಹಾಗೂ ಸಮಾಜ ತಲೆತಗ್ಗಿಸುವಂತಹ ಸಹಿಸಲಸಾಧ್ಯವಾದ ಕೃತ್ಯವಾಗಿದೆ.

​ಕಪ್ಪೆ ಚಿಪ್ಪು ಸಂಗ್ರಹಿಸಲು ಹೋಗಿ ಸಮುದ್ರದಲ್ಲಿ ದುರಂತ ಸಾವಿಗೀಡಾದ ಬಡ ಜನರ ಶೋಕಾಚರಣೆಯಲ್ಲಿ ಇಡೀ ಭಟ್ಕಳದ ಜನತೆ ಮುಳುಗಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲೇ ತಡರಾತ್ರಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಕಿಡಿಗೇಡಿಗಳು ಈ ಧ್ವಂಸ ಕೃತ್ಯ ಎಸಗಿರುವುದು ಅವರ ವಿಕೃತ ಮನೋಭಾವ ಹಾಗೂ ಕೋಮು ದ್ವೇಷಕ್ಕೆ ಸಾಕ್ಷಿಯಾಗಿದೆ. ಸತ್ತವರ ಶೋಕದ ನಡುವೆಯೂ ಇಂತಹ ಕೃತ್ಯಕ್ಕೆ ಸಂಚು ರೂಪಿಸಿದ ಇವರ ಧಾರ್ಮಿಕ ಅಸಹಿಷ್ಣುತೆಯನ್ನು ತೀವ್ರ ಪದಗಳಲ್ಲಿ ಖಂಡಿಸಲೇಬೇಕಾಗಿದೆ.
​ಮುಖ್ಯವಾಗಿ, ಈ ಮೂರುನಕಟ್ಟೆ ಸ್ಥಳವು ಮುಸ್ಲಿಮರಿಗೆ ಯಾವುದೇ ರೀತಿಯಲ್ಲೂ ಸಂಬಂಧಪಡದ ವಿಷಯವಾಗಿತ್ತು. ಇದು ಕೇವಲ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಹಿಂದೂ ಸಮಾಜದ ನಡುವಿನ ಒಪ್ಪಂದದ ಅನ್ವಯ ನಿರ್ಮಾಣಗೊಂಡ ಹಿಂದೂಗಳ ಧಾರ್ಮಿಕ ಭಾಗವಾಗಿತ್ತು. ಇದು ಮುಸ್ಲಿಮರಿಗೆ ಸೇರಿದ ಜಾಗವೂ ಅಲ್ಲ, ಅವರಿಗೆ ಯಾವುದೇ ಕಾರಣಕ್ಕೂ ಸಂಬಂಧಿಸಿದ ವಿಷಯವೂ ಆಗಿರಲಿಲ್ಲ. ಹೀಗಿದ್ದೂ, ಕೇವಲ ಜಿಲ್ಲೆಯ ಕೋಮು ಸೌಹಾರ್ದತೆಯನ್ನು ಕೆಡಿಸಿ, ಗಲಭೆ ಸೃಷ್ಟಿಸುವ ಏಕೈಕ ದುರುದ್ದೇಶದಿಂದಲೇ ಈ ಧ್ವಂಸ ಕೃತ್ಯ ಎಸಗಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
​ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಸಂದರ್ಭದಲ್ಲಿ, ಹಿಂದೂಗಳು ತಮ್ಮ ಧಾರ್ಮಿಕ ಭಾವನೆಯನ್ನು ಬದಿಗಿಟ್ಟು ದೇಶದ ಅಭಿವೃದ್ಧಿ ಕಾರ್ಯಗಳಿಗಾಗಿ ಹಳೆಯ ಕಟ್ಟೆಯನ್ನು ಬಿಟ್ಟುಕೊಟ್ಟಿದ್ದರು. ಆ ಬಳಿಕ ಹಿಂದೂ ಸಂಘಟನೆಗಳ ಪ್ರಮುಖರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಾವೂ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ್ದೆವು. ಈ ನೂತನ ಕಟ್ಟೆಯಿಂದ ಯಾರಿಗೂ, ಯಾವುದೇ ರೀತಿಯ ತೊಂದರೆ ಇರಲಿಲ್ಲ.
​ಯಾವುದೇ ಕಾನೂನಾತ್ಮಕ ಆಕ್ಷೇಪಣೆಗಳಿದ್ದರೂ ಸಂಬಂಧಪಟ್ಟ ಮುಖಂಡರು ಅಧಿಕಾರಿಗಳ ಬಳಿ ಶಾಂತಿಯುತವಾಗಿ ಚರ್ಚಿಸಬಹುದಿತ್ತು. ಅದನ್ನು ಬಿಟ್ಟು, ಕಾನೂನನ್ನು ಸಂಪೂರ್ಣವಾಗಿ ಕೈಗೆತ್ತಿಕೊಂಡು, ಗೂಂಡಾವರ್ತನೆಯ ಮೂಲಕ ಹಿಂದೂಗಳ ಅಸ್ಮಿತೆಯಂತಿದ್ದ ಪವಿತ್ರ ಕಟ್ಟೆಯನ್ನು ಒಡೆದು ಹಾಕಿರುವದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ಸಮಾಜಘಾತಕ ಗೂಂಡಾಗಿರಿಯನ್ನು ಹಿಂದೂ ಸಮಾಜವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಮತ್ತು ಕ್ಷಮಿಸುವುದೂ ಇಲ್ಲ.
​ಭಟ್ಕಳದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ನೆಮ್ಮದಿಯಿಂದ ಬದುಕುತ್ತಿರುವ ಶಾಂತಿಯುತ ವಾತಾವರಣದ ನಡುವೆ ಇಂತಹದೊಂದು ಕಹಿ ಘಟನೆ ನಡೆದಿರುವುದು ಅತ್ಯಂತ ದುರದೃಷ್ಟಕರ. ಪ್ರಸ್ತುತ ರಾಜ್ಯ ಸರ್ಕಾರದ ಅತಿರೇಕದ ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕಾರಣವೇ ಇಂತಹ ಧಾರ್ಮಿಕ ದೌರ್ಜನ್ಯಗಳಿಗೆ ನೇರ ಪ್ರೇರಣೆಯಾಗಿದೆ. ಕ್ಷೇತ್ರದಲ್ಲಿ ಇಂದು ಹಿಂದೂ ಕಾರ್ಯಕರ್ತರಿಗಾಗಲಿ ಅಥವಾ ಕರ್ತವ್ಯನಿರತ ಪೊಲೀಸರಿಗಾಗಲಿ ರಕ್ಷಣೆ ಇಲ್ಲದಂತಹ ಅರಾಜಕತೆ ಸೃಷ್ಟಿಯಾಗಿದೆ. ಸ್ಥಳೀಯ ಶಾಸಕರು ಮತ್ತು ಸಚಿವರ ಸ್ವಕ್ಷೇತ್ರದಲ್ಲೇ ಇಂತಹ ಧಾರ್ಮಿಕ ದೌರ್ಜನ್ಯ ನಡೆದಿರುವುದು ಅವರ ಆಡಳಿತಾತ್ಮಕ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಹಿಂದೂಗಳನ್ನು ಮಟ್ಟ ಹಾಕಿ, ಕೇವಲ ಒಂದು ವರ್ಗದ ಮತಬ್ಯಾಂಕ್ ರಾಜಕಾರಣ ಮಾಡಲು ಹೊರಟಿರುವ ಇವರ ಪ್ರಭಾವ ಹಾಗೂ ಕುಮ್ಮಕ್ಕಿನಿಂದಲೇ ಇಂತಹ ಘಟನೆಗಳು ಮರುಕಳಿಸುತ್ತಿವೆ.
ಹಿಂದೂಗಳ ಶಾಂತಿ ಮತ್ತು ತಾಳ್ಮೆಯನ್ನು ಯಾರೂ ದೌರ್ಬಲ್ಯ ಎಂದು ಭಾವಿಸಬಾರದು. ಧ್ವಂಸಗೊಂಡಿರುವ ಪವಿತ್ರ ಕಟ್ಟೆಯನ್ನು ತಕ್ಷಣವೇ ಯಥಾಸ್ಥಿತಿಯಲ್ಲಿ ಅದೇ ಜಾಗದಲ್ಲಿ ಮರುಸ್ಥಾಪಿಸಬೇಕು. ಕಾನೂನು ಕೈಗೆತ್ತಿಕೊಂಡು ಕೋಮು ಸೌಹಾರ್ದತೆ ಕೆಡಿಸಲು ಯತ್ನಿಸಿದ ಪ್ರತಿಯೊಬ್ಬ ಕಿಡಿಗೇಡಿಯನ್ನು ತಕ್ಷಣವೇ ಬಂಧಿಸಿ, ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಇಡೀ ಹಿಂದೂ ಸಮಾಜ ಒಗ್ಗೂಡಿ ಉಗ್ರ ಹೋರಾಟ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ತೀವ್ರವಾಗಿ ಎಚ್ಚರಿಸುತ್ತಿದ್ದೇವೆ.

ವಿಶ್ವೇಶ್ವರ ಹೆಗಡೆ ಕಾಗೇರಿ.
ಸಂಸದರು ಉತ್ತರ ಕನ್ನಡ