Banner Ad

ಸುದ್ದಿ ಕನ್ನಡ ವಾರ್ತೆ
ಕಾರವಾರ: ತಾಲೂಕಿನ ಐತಿಹಾಸಿಕ ಪ್ರಸಿದ್ದ ಸಿದ್ದರೆ ಗ್ರಾಮದ ಶ್ರೀ ನರಸಿಂಹ ನಾರಾಯಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಪರಿವಾರ ದೇವರ ಮಂದಿರಗಳ ಉದ್ಘಾಟನೆ ಹಾಗೂ ನವಗ್ರಹ ಪ್ರತಿಷ್ಠಾನ ಮಹೋತ್ಸವವು ಎ.28ರಿಂದ 30ರವರೆಗೆ ವಿಜೃಂಭಣೆಯಿಂದ ಜರುಗಲಿದೆ.12ನೇ ಶತಮಾನದ ಇತಿಹಾಸ ಹೊಂದಿರುವ ಈ ಕ್ಷೇತ್ರವು ಕದಂಬ ಅರಸರ ಆರಾಧನಾ ಕೇಂದ್ರವಾಗಿತ್ತು. ದ್ವಿಹಸ್ತ ರೂಪದ ನರಸಿಂಹ ದೇವರು ಹಾಗೂ ಸುದರ್ಶನ ಚಕ್ರ ಇಲ್ಲಿನ ವಿಶೇಷ, ಸರ್ವ ರೋಗ ನಿವಾರಕ ಶಕ್ತಿ ಹೊಂದಿರುವ ಇಲ್ಲಿನ ‘ಖೋಡಿ ತೀರ್ಥ’ವು ಪಾಪನಾಶಿನಿ ಎಂದೇ ಪ್ರಖ್ಯಾತವಾಗಿದೆ.
ಇದೀಗ ಶ್ರೀದೇವಿ-ಭೂದೇವಿ ಸಹಿತ ಶ್ರೀ ನಾರಾಯಣ ಸ್ವಾಮಿ, ಗ್ರಾಮಪುರುಷ ದೇವರು ಹಾಗೂ ನವಗ್ರಹ ಮಂದಿರಗಳನ್ನು ಕೃಷ್ಣಶಿಲೆಯಲ್ಲಿ ನೂತನವಾಗಿ ನಿರ್ಮಿಸಲಾಗಿದೆ.

ಎಪ್ರಿಲ್ 28ರಂದು ಬೆಳಿಗ್ಗೆ 8ಕ್ಕೆ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ಸಿಗಲಿದೆ. ಸಂಜೆ ದೇವತಾ ಪ್ರಾರ್ಥನೆ, ವಾಸ್ತುಶಾಂತಿ ಹಾಗೂ ವಾಸ್ತುಬಲಿ ಹೋಮಗಳು ನಡೆಯಲಿವೆ.
ಎಪ್ರಿಲ್ 29ರಂದು ಬೆಳಿಗ್ಗೆ 10:52ರ ಶುಭ ಮುಹೂರ್ತದಲ್ಲಿ ಕಾರವಾರ ರಾಮಕೃಷ್ಣ ಆಶ್ರಮದ ಶ್ರೀ ಭವೇಶಾನಂದ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶಿಖರ ಸ್ಥಾಪನೆ ನೆರವೇರಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕ ಸತೀಶ ಸೈಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಎಪ್ರಿಲ್ 30ರಂದು ನರಸಿಂಹ ಜಯಂತಿಯಂದು ವಿಷ್ಣುಯಾಗ ಹಾಗೂ ಮಹಾಪೂರ್ಣಾಹುತಿ ಜರುಗಲಿದೆ. ಸಂಜೆ ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ ಕೊಂಕಣಿ ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮೂರು ದಿನಗಳ ಕಾಲ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಸಮಿತಿ ವಿನಂತಿಸಿದೆ.

Banner Ad
Banner Ad