ಸುದ್ದಿ ಕನ್ನಡ ವಾರ್ತೆ
ಶಿರಸಿ: ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಆರಾಧ್ಯ ದೇವರು ಶ್ರೀಲಕ್ಷ್ಮೀನೃಸಿಂಹ ದೇವರ ಜಯಂತಿ ದಿನದ ಹಿನ್ನೆಲೆಯಲ್ಲಿ ಏ.೨೯ಹಾಗೂ ೩೦ರಂದು ಎರಡು ದಿನಗಳ ೧೮ನೇ ಕೃಷಿ ಜಯಂತಿಯನ್ನು ಈ ಬಾರಿ ಕೂಡ ಹಮ್ಮಿಕೊಳ್ಳಾಗಿದೆ ಎಂದು ಸ್ವರ್ಣವಲ್ಲೀ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ನುಡಿದರು.
ಶ್ರೀಮಠದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ, ಸ್ವರ್ಣವಲ್ಲೀ ಮಠ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನ, ಟಿಎಸ್ಎಸ್, ಟಿಎಂಎಸ್, ಜಾಗೃತ ವೇದಿಕೆ, ಗ್ರಾಮಾಭ್ಯುದಯದ ಸಹಭಾಗಿತ್ವದಲ್ಲಿ ಕೃಷಿ ಜಯಂತಿ ನಡೆಯಲಿದೆ.
ಕೃಷಿ ಜಯಂತಿ ೨೯ರ
ಬೆಳಿಗ್ಗೆ ೧೦.೩೦ರಿಂದಲೇ ಕೃಷಿ ಜಯಂತಿಯ ಕಾರ್ಯಕ್ರಮಗಳು ಆರಂಭವಾಗಲಿವೆ. ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ, ಶ್ರೀ ಆನಂದಬೋಧೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಡೆಯಲಿದ್ದು, ಶಿವಮೊಗ್ಗ ಬೆಕ್ಕಿನಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾ ಸ್ವಾಮೀಜಿ ಉದ್ಘಾಟಿಸುವರು. ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಭೀಮಣ್ಣ ನಾಯ್ಕ ಭಾಗವಹಿಸುವರು.
ಬಳಿಕ ಅಂಗನವಾಡಿ, ಪ್ರಾಥಮಿಕ ಶಾಲಾಕ್ಕಳಿಗೆ, ಮಾತೆಯರಿಗೆ ವಿವಿಧ ಸ್ಪರ್ಧೆಗಳು ಜರುಗಲಿವೆ. ರಾಜ್ಯ ಮಟ್ಟದ ಕೃಷಿ ರಸಪ್ರಶ್ನೆಯ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ.
ಸಂಜೆ ೪ರಿಂದ ‘ಕಾಫಿ-ಏಲಕ್ಕಿ-ಕಾಳುಮೆಣಸು ಅಡಿಕೆ ತೋಟದಲ್ಲಿದ್ದರೆ ಸೊಗಸು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ಕೃಷಿ ತಜ್ಞರಾದ ಡಾ. ಸುಧೀಶ್ ಕುಲಕರ್ಣಿ ಹಾಗೂ ಡಾ. ಹರೀಶ್ ಡಿ.ಕೆ. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಕದಂಬದ ಸಲಹೆಗಾರ ವಿಶ್ವೇಶ್ವರ ಭಟ್ಟ ಕೋಟೆಮನೆ ವಹಿಸಿಕೊಳ್ಳುವರು. ಬಳಿಕ ವಿವಿಧ ಸಾಧಕ ಕೃಷಿಕರ ಜೊತೆ ಸಂವಾದ ನಡೆಯಲಿದೆ. ಸಂಜೆ ೬.೩೦ರಿಂದ ಸುಧಾ ಹೆಗಡೆ ಹೊಸ್ತೋಟ ಬಳಗದಿಂದ ಭಕ್ತಿಸಂಗೀತ ನಡೆಯಲಿದೆ.
೩೦ರ ಬೆಳಿಗ್ಗೆ ರೈತರಿಗೆ, ಮಾತೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ೧೦.೩೦ರಿಂದ ಆನಂದ ಹೆಗಡೆ, ರವಿ ಭಟ್ಟ ಅವರ ತೋಟ ವೀಕ್ಷಣೆಯ ಬಳಿಕ ಹಿರಿಯ ವಿಜ್ಞಾನಿ ಡಾ. ಸತೀಶ ಹೆಗಡೆ ಹುಳಗೋಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ರವಿ ಭಟ್ಟ, ಡಾ. ರಾಮಕೃಷ್ಣ ಹೆಗಡೆ ಏಲಕ್ಕಿ ಹಾಗೂ ಬಿದಿರು ಬೇಸಾಯ ಕುರಿತು ಮಾತನಾಡುವರು.
ಸಂಜೆ ೪.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸ್ವರ್ಣವಲ್ಲೀ ಮಠದ ಉಭಯ ಶ್ರೀಗಳು ಸಾನ್ನಿಧ್ಯ ನೀಡಲಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರೀಯ ಸಂಬಾರ ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ, ಸಹಕಾರಿಗಳಾದ ಜಿ.ಟಿ.ಹೆಗಡೆ ತಟ್ಟಿಸರ, ಗೋಪಾಲಕೃಷ್ಣ ವೈದ್ಯ ಭಾಗವಹಿಸುವರು.
ಇದೇ ವೇಳೆ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಉತ್ತಮ ಕೃಷಿಕ, ಸಾಧಕ ಕೃಷಿ ಮಹಿಳೆ ಹಾಗೂ ಉತ್ತಮ ಅವಿಭಕ್ತ ಕೃಷಿ ಕುಟುಂಬಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ರಾತ್ರಿ ಸುಪ್ರಿಯಾ ಹೆಗಡೆ ಮತ್ತು ತಂಡದವರಿಂದ ಲಘು ಸಂಗೀತ, ನಾಟ್ಯ ಕಲಾ ತಂಡದಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ.
ಇನ್ನು 30ರ ರಾತ್ರಿ ಶ್ರೀ ಲಕ್ಷ್ಮೀನೃಸಿಂಹ ಮಹಾರಥೋತ್ಸವ
ಧಾರ್ಮಿಕ ವಿಧಿವಿಧಾನಗಳ ಮೂಲಕ ಅದ್ಧೂರಿಯಾಗಿ ನೆರವೇರಲಿವೆ. ಬೆಳಿಗ್ಗೆ ಹೊರ ಕಾಣಿಕೆ ಸಮರ್ಪಣೆ, ಫಲಪಂಚಾಮೃತ, ಯಾಗಶಾಲಾ ಕಾರ್ಯಕ್ರಮಗಳು, ಶತರುದ್ರಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ. .
ರಥೋತ್ಸವದ ನಂತರ ಯಕ್ಷಶಾಲ್ಮಲಾ ನೇತೃತ್ವದಲ್ಲಿ ‘ಸುಭದ್ರಾ ಕಲ್ಯಾಣ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಎರಡು ದಿನಗಳ ಕಾಲ ಮಠದ ಆವರಣದಲ್ಲಿ ರಾಜ್ಯ ಮಟ್ಟದ ಕೃಷಿ ಆಧಾರಿತ ಉತ್ಪನ್ನಗಳ ಪ್ರದರ್ಶನ, ಸ್ಥಳೀಯ ರೈತರು ಅಭಿವೃದ್ಧಿಪಡಿಸಿದ ಸರಳ ಯಂತ್ರಗಳ ಪ್ರದರ್ಶನ ಹಾಗೂ ವಿವಿಧ ಗೊಬ್ಬರ ಮತ್ತು ಸಸ್ಯಜನ್ಯ ಕೀಟನಾಶಕಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.
ಈ ವೇಳೆ ಕೃಷಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಸುರೇಶ ಹಕ್ಕಿಮನೆ, ಸುಬ್ರಾಯ ಹೆಗಡೆ ತ್ಯಾಗಲಿ, ಜಾಗೃತ ವೇದಿಕೆಯ ಕಾರ್ಯಾಧ್ಯಕ್ಷ ರತ್ನಾಕರ ಬಾಡಲಕೊಪ್ಪ ಇತರರು ಇದ್ದರು.
ಅಡಿಕೆ ಬೆಳೆಗಾರರು ಉಪ ಬೆಳೆಗಳ ಬೆಳೆಯಬೇಕು. ಏಲಕ್ಕಿ, ಕಾಳು ಮೆಣಸು, ಕಾಫಿ ಬೇಸಾಯದ ಬಗ್ಗೆ ಲಕ್ಷ್ಯ ಹಾಕಬೇಕು. ತೋಟಗಾರಿಕಾ ಸಚಿವರಿಗೆ ಬೆಟ್ಟದ ಬ ಕರಾಬು ಸಮಸ್ಯೆ ಬಗ್ಗೆ ಮನವಿ ನೀಡಲಾಗುತ್ತದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
ಸ್ವರ್ಣವಲ್ಲೀ ಶ್ರೀ
ಪ್ರಶಸ್ತಿ ಪುರಸ್ಕೃತರು
ಕೃಷಿ ಕಂಠೀರವ: ದತ್ತಾತ್ರಯ ಹೆಗಡೆ ಕೈಗಡಿ
ಸಾಧಕ ಕೃಷಿ ಮಹಿಳೆ: ಮಮತಾ ವಿನಾಯಕ ಭಟ್ ಶಮೆಮನೆ
ಸಾಧಕ ಕೃಷಿ ಕುಶಲಕರ್ಮಿ: ವೆಂಕಟ್ರಮಣ ಹೆಗಡೆ ಕಲಾವನ
ಉತ್ತಮ ಅವಿಭಕ್ತ ಕುಟುಂಬ: ಸುಬ್ರಹ್ಮಣ್ಯ ಹೆಗಡೆ ಶಿರನಾಳ
ಉತ್ತಮ ಬೆಟ್ಟ ಪ್ರಶಸ್ತಿ
ಪ್ರಥಮ: ರಾಮಚಂದ್ರ ಹೆಗಡೆ ಗುಂಡಿಗದ್ದೆ
ದ್ವಿತೀಯ: ಮಂಜುನಾಥ ಭಟ್ಟ ತಟ್ಟೀಕೈ, ಚಂದ್ರಶೇಖರ ಭಾಗವತ, ಜಕ್ಕೊಳ್ಳಿ
