Banner Ad

ಸುದ್ದಿ ಕನ್ನಡ ವಾರ್ತೆ
ಮುಂಡಗೋಡ: ತಾಲೂಕಿನ ಮುಂಡಗೋಡದಿಂದ ಕಲಘಟಗಿ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಾಯಂಕಾಲ ವಿಪರೀತ ಆಲಿಕಲ್ಲು ಮಳೆ ಸುರಿದಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ರಸ್ತೆಯುದ್ದಕ್ಕೂ ಆಲಿಕಲ್ಲುಗಳು ಹಾಸಿದ ಪರಿಣಾಮ ಹೆದ್ದಾರಿಯು ಕಾಶ್ಮೀರದಂತೆ ಶ್ವೇತಮಯವಾಗಿ ಗೋಚರಿಸಿತು.
ಸಾಯಂಕಾಲ ಹಠಾತ್ತನೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ವಾಹನ ಚಾಲಕರು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಬೇಕಾದ ಪರಿಸ್ಥಿತಿ
ನಿರ್ಮಾಣವಾಯಿತು. ಸುರಿದ ಅತಿಯಾದ ಆಲಿಕಲ್ಲುಗಳಿಂದಾಗಿ ರಸ್ತೆಯು ಪೂರ್ತಿಯಾಗಿ ಮಂಜಿನಿಂದ ಆವೃತವಾದಂತೆ ಕಂಡುಬಂದಿತು. ಸುಮಾರು 1 ರಿಂದ ಒಂದೂವರೆ ಅಡಿಯಷ್ಟು ಎತ್ತರದಲ್ಲಿ ಆಲಿಕಲ್ಲುಗಳು ಸಂಗ್ರಹವಾಗಿದ್ದರಿಂದಾಗಿ ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತು.

Banner Ad

ರಸ್ತೆಯ ತುಂಬೆಲ್ಲಾ ಬಿಳಿ ಆಲಿಕಲ್ಲುಗಳು ಹರಡಿದ್ದನ್ನು ಕಂಡ ಪ್ರಯಾಣಿಕರು ಮತ್ತು ವಾಹನ ಸವಾರರು ವಾಹನಗಳನ್ನು ಪಕ್ಕಕ್ಕೆ ನಿಲ್ಲಿಸಿ, ಈ ಅಪರೂಪದ ಕ್ಷಣಗಳನ್ನು ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು. ‘ನಮ್ಮ ಭಾಗದಲ್ಲಿ ಇಂತಹ ಮಳೆಯನ್ನು ಪ್ರಪ್ರಥಮ ಬಾರಿಗೆ ನೋಡುತ್ತಿದ್ದೇವೆ, ರಸ್ತೆಗಳು ಕಾಶ್ಮೀರದಂತೆ ಕಾಣುತ್ತಿವೆ’ ಎಂದು ಸವಾರರು ಆಶ್ಚರ್ಯದೊಂದಿಗೆ ಸಂತಸ ವ್ಯಕ್ತಪಡಿಸಿದರು.
ವಾಹನ ಸಂಚಾರಕ್ಕೆ ಸ್ವಲ್ಪ ತೊಂದರೆಯಾದರೂ, ಸುಡುಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಈ ಆಲಿಕಲ್ಲು ಮಳೆ ತಂಪಾದ ಅನುಭವ ನೀಡಿತು.

Banner Ad