ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ತಾಲೂಕಿನ ಮುಡಿಯೇ ಗ್ರಾಮದ ಯುವತಿ ಹಾಗೂ ಧಾರವಾಡದ ಕೆಸಿಡಿ ಕಾಲೇಜಿನ ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿನಿ ಪ್ರಜಿತಾ ಪ್ರಕಾಶ್ ವೇಳಿಪ (19) ಅವರ ಅನುಮಾನಾಸ್ಪದ ಸಾವು ಪ್ರಕರಣ ಗಂಭೀರ ತಿರುವು ಪಡೆದಿದ್ದು, ಪಾರದರ್ಶಕ ತನಿಖೆಗೆ ಒತ್ತಾಯ ಹೆಚ್ಚಾಗಿದೆ.
ಪ್ರಜಿತಾ ಅವರು ಧಾರವಾಡದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಸರ್ಕಾರಿ ವಸತಿ ನಿಲಯದಲ್ಲಿ ವಾಸಿಸುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಅವರು, ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ, ಮೃತಳ ತಂದೆ ಪ್ರಕಾಶ್ ವೇಳಿಪ ಅವರು ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಧಾರವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಮೃತಳ ಮೊಬೈಲ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಇದೀಗ, ವಿದ್ಯಾರ್ಥಿನಿ ಪ್ರಜಿತಾ ಸಾವಿನ ತನಿಖೆಯನ್ನು ತಕ್ಷಣ ನಡೆಸಿ, ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸಿ ಬಡ ಕುಟುಂಬಕ್ಕೆ ನ್ಯಾಯ ನೀಡಬೇಕು ಎಂದು ಕುಣಬಿ ಸಮಾಜದ ಮುಂದಾಳತ್ವದಲ್ಲಿ ಮುಡಿಯೆ ಗ್ರಾಮದ ಗ್ರಾಮಸ್ಥರು, ಪಾಲಕರು ಹಾಗೂ ಸಾರ್ವಜನಿಕರು ಸೇರಿ ಸೋಮವಾರ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಪತ್ರದಲ್ಲಿ, “ಈ ಪ್ರಕರಣದಲ್ಲಿ ಶೀಘ್ರ ಮತ್ತು ಪಾರದರ್ಶಕ ತನಿಖೆ ನಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ” ಎಚ್ಚರಿಕೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ನ್ಯಾಯಕ್ಕಾಗಿ ಒತ್ತಾಯಗಳು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿವೆ.
