ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ:ತಾಲೂಕಿನ ಕೋಳಿಕೇರಿ ಬಳಿ ರಾಷ್ಟ್ರೀಯ ಹೆದ್ದಾರಿ 52 ರ ರಸ್ತೆ ಪಕ್ಕದ ಮರವೊಂದು ಗ್ಯಾಸ್ ಟ್ಯಾಂಕರ್ ಮೇಲೆ ಬಿದ್ದ ಘಟನೆ ನಡೆದಿದೆ.

ಯಲ್ಲಾಪುರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಹೆದ್ದಾರಿಯಂಚಿನಿಂದ 6-8 ಅಡಿ ಆಳದ ಗುಂಡಿ ತೆಗೆದು ಬೃಹದಾಕಾರದ ಪೈಪ್ ಲೈನ್ ಅಳವಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗುಂಡಿ ತೋಡುವಾಗ ಮರದ ಬೇರು ಸಡಿಲಗೊಂಡು ಮರ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದೆ. ಆ ಸಂದರ್ಭದಲ್ಲಿ ಹೆದ್ದಾರಿಯಲ್ಲಿ
ಮಂಗಳೂರು ಕಡೆಗೆ ಹೊರಟಿದ್ದ ಖಾಲಿ ಗ್ಯಾಸ್ ಟ್ಯಾಂಕರ ಹೆದ್ದಾರಿಯಲ್ಲಿ ಸಂಚರಿಸುತಿತ್ತು. ಟ್ಯಾಂಕರ್ ಚಾಲಕ ತಕ್ಷಣ ಬ್ರೆಕ್ ಹಾಕಿ ಟ್ಯಾಂಕರ್ ನಿಲ್ಲಿಸಿದ ಕಾರಣ ಉಂಟಾಗುವ ಅನಾಹುತ ತಪ್ಪಿದೆ.

ಟ್ಯಾಂಕರ್ ನ ಕ್ಯಾಬಿನ್ ಮೇಲೆ ಹಲವು ಮರದ ಟೊಂಗೆಗಳು ಬಿದ್ದಿದ್ದು ಕೂದಲೆಳೆಯಲ್ಲಿ ಅಪಾಯ ತಪ್ಪಿದೆ. ಇದರಿಂದ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ನಂತರ ಹಿಟಾಚಿ ಬಳಸಿ ಮರವನ್ನು ಪಕ್ಕಕ್ಕೆ ಸರಿಸಿದ ನಂತರದಲ್ಲಿ ವಾಹನ ಸಂಚಾರ ಆರಂಭಗೊಂಡಿತು.