Banner Ad

ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಗೋವಾ-ಬೆಳಗಾವಿ
ರಾಷ್ಟ್ರೀಯ ಹೆದ್ದಾರಿಯ ಅನಮೋಡ ಬಳಿ ಇರುವ ಅಂತರರಾಜ್ಯ ಫಾರೆಸ್ಟ್ ಚೆಕ್ ನಾಕಾದಲ್ಲಿ ಶುಕ್ರವಾರ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.

ಹೊಸಪೇಟೆಯಿಂದ ಗೋವಾಕ್ಕೆ ಮ್ಯಾಂಗನೀಸ್ ಸಾಗಿಸುತ್ತಿದ್ದ 16 ಚಕ್ರದ ಬೃಹತ್ ಲಾರಿಯೊಂದು ಏಕಾಏಕಿ ಹಿಮ್ಮುಖವಾಗಿ ಚಲಿಸಿ ಫಾರೆಸ್ಟ್ ಟೋಲ್ ನಾಕಾವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಲಾರಿ ಚಾಲಕನು ಮ್ಯಾಂಗನೀಸ್ ಸಾಗಾಟದ ಪರವಾನಗಿಗೆ ಸೀಲ್ ಹಾಕಿಸಿಕೊಳ್ಳುವ ಸಲುವಾಗಿ ಟೋಲ್ ದಾಟಿ ವಾಹನ ನಿಲ್ಲಿಸಿ ಕೆಳಗೆ ಇಳಿದಿದ್ದನು. ಇದೇ ವೇಳೆ ಲಾರಿ ಹಠಾತ್ತನೆ ಹಿಂದಕ್ಕೆ ಸರಿಯಲು ಆರಂಭಿಸಿ ಈ ಅವಘಡ ಸಂಭವಿಸಿದೆ.

Banner Ad

ನಿಯಂತ್ರಣ ತಪ್ಪಿ ಹಿಂಬದಿಗೆ ಜಾರಿದ ಬೃಹತ್ ಲಾರಿಯು ಟೋಲ್ ನಾಕಾದ ಗೇಟ್, ಫಾಸ್ಟ್ ಟ್ಯಾಗ್ ಯಂತ್ರ, ಸೋಲಾರ್ ಲೈಟ್ ಹಾಗೂ ಸಿಸಿಟಿವಿ ಕ್ಯಾಮೆರಾಗಳ ಮೇಲೆ ಹರಿದು ಅಪಾರ ಹಾನಿ ಉಂಟುಮಾಡಿದೆ. ಘಟನೆಯ ಸಮಯದಲ್ಲಿ ಚೆಕ್ ಪೋಸ್ಟ್ ಬಳಿ ಇಬ್ಬರು ಸಿಬ್ಬಂದಿ ಕರ್ತವ್ಯದಲ್ಲಿದ್ದರು. ವಾಹನವು ತಮ್ಮತ್ತಲೇ ಹಿಂದ-ಕ್ಕೆ ಬರುತ್ತಿರುವುದನ್ನು ಗಮನಿಸಿದ ಅವರು, ಕ್ಷಣಾರ್ಧದಲ್ಲಿ ಅಲ್ಲಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊನೆಗೆ ಹಿಮ್ಮುಖವಾಗಿ ಚಲಿಸಿದ ಲಾರಿಯು ರಸ್ತೆ ಬದಿಯ ಗಟಾರಿಗೆ ಇಳಿದು ಸಿಲುಕಿಕೊಂಡಿದೆ.

ಅರಣ್ಯ ಇಲಾಖೆಯ ಅಭಿವೃದ್ಧಿ ಕಾರ್ಯಗಳಿಗಾಗಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ಅನಮೋಡ
ಪ್ರದೇಶದಲ್ಲಿ ಈ ಫಾರೆಸ್ಟ್ ಚೆಕ್ ನಾಕಾವನ್ನು ಸ್ಥಾಪಿಸಲಾಗಿದೆ. ಇಲ್ಲಿ ಗೋವಾ ರಾಜ್ಯದಿಂದ ಬರುವ ವಾಹನಗಳು ಹಾಗೂ ಕರ್ನಾಟಕದಿಂದ ಗೋವಾಕ್ಕೆ ತೆರಳುವ ವಾಹನಗಳಿಗೆ ಫಾಸ್ಟ್‌ ಟ್ಯಾಗ್ ಮೂಲಕ ಶುಲ್ಕ ವಸೂಲಿ ಮಾಡಲಾಗುತ್ತದೆ.
ನಿಯಮಾವಳಿಯಂತೆ ಸಣ್ಣ ವಾಹನಗಳಿಗೆ 20 ರೂ. ಹಾಗೂ ಭಾರಿ ವಾಹನಗಳಿಗೆ 50 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದೀಗ ಈ ಅಪಘಾತದಿಂದಾಗಿ ಚೆಕ್ ಪೋಸ್ಟ್‌ನ ವ್ಯವಸ್ಥೆಗೆ ಭಾರಿ ಹಾನಿಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Banner Ad