ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ದುಬಾರೆಯಲ್ಲಿ ಆನೆ ಸಾವಿನ ನಂತರ ತಾಲೂಕಿನ ಪಣಸೋಲಿ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಪಣಸೋಲಿ ಆನೆ ಶಿಬಿರ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರಕೃತಿ ಮತ್ತು ವನ್ಯಜೀವಿ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕಾಳಿ ಅರಣ್ಯದ ನಿಸರ್ಗ ಸೌಂದರ್ಯದ ನಡುವೆ ನೆಲೆಗೊಂಡಿರುವ ಈ ಶಿಬಿರದಲ್ಲಿ ಸಾಕಾನೆಗಳ ಆರೈಕೆ, ಸ್ನಾನ, ಆಹಾರ ವಿತರಣೆ ಮತ್ತು ತರಬೇತಿ ಕ್ರಮಗಳನ್ನು ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ವಿಶೇಷವಾಗಿ ಮಕ್ಕಳಿಗೆ ಆನೆಗಳನ್ನು ಸಮೀಪದಿಂದ ನೋಡುವ ಅವಕಾಶ ನೀಡುತ್ತಿದ್ದ ಈ ತಾಣ ಕುಟುಂಬ ಪ್ರವಾಸದ ಆಕರ್ಷಣೆಯಾಗಿ ರೂಪುಗೊಂಡಿತ್ತು.
ಆದರೆ ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ಸಂಭವಿಸಿದ ದುರ್ಘಟನೆ ಬಳಿಕ ರಾಜ್ಯದ ಅನೇಕ ಆನೆ ಶಿಬಿರಗಳಲ್ಲಿ ಸುರಕ್ಷತಾ ಕಾರಣ ಉಲ್ಲೇಖಿಸಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಅದರ ಪರಿಣಾಮ ದಾಂಡೇಲಿಯ ಪಣಸೋಳಿ ಶಿಬಿರಕ್ಕೂ ತಟ್ಟದೆ.
ವನ್ಯಜೀವಿ ತಜ್ಞರ ಪ್ರಕಾರ, ಆನೆಗಳು ಅತ್ಯಂತ ಬುದ್ಧಿವಂತ ಹಾಗೂ ಭಾವನಾತ್ಮಕ ಪ್ರಾಣಿಗಳು. ಅವುಗಳ ವರ್ತನೆ ಪರಿಸರ, ಶಬ್ದ, ಜನಸಂದಣಿ, ಹವಾಮಾನ ಮತ್ತು ಮಾನವ ವರ್ತನೆಯಿಂದ ಪ್ರಭಾವಿತವಾಗುತ್ತದೆ. ವಿಶೇಷವಾಗಿ ಜನನ ಕಾಲ, ಆರೋಗ್ಯ ಸಮಸ್ಯೆ ಅಥವಾ “ಮಸ್ತ್” ಸ್ಥಿತಿಯಲ್ಲಿರುವ ಗಂಡಾನೆಗಳು ಅಸಹಜವಾಗಿ ವರ್ತಿಸುವ ಸಾಧ್ಯತೆ ಹೆಚ್ಚಿರುತ್ತದೆ.
ಆದರೆ ವಿಜ್ಞಾನಾಧಾರಿತ ನಿರ್ವಹಣಾ ಕ್ರಮಗಳನ್ನು ಅನುಸರಿಸಿದರೆ ಪ್ರವಾಸಿಗರ ವೀಕ್ಷಣೆಯನ್ನು ಸಂಪೂರ್ಣ ನಿಷೇಧಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯವನ್ನು ಅರಣ್ಯ ಮತ್ತು ವನ್ಯಜೀವಿ ಅಧ್ಯಯನ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ. ದೇಶದ ಅನೇಕ ಸಂರಕ್ಷಿತ ಪ್ರದೇಶಗಳಲ್ಲಿ “ನಿಯಂತ್ರಿತ ವೀಕ್ಷಣಾ ವ್ಯವಸ್ಥೆ” ಯಶಸ್ವಿಯಾಗಿ ಜಾರಿಯಲ್ಲಿದೆ.
ನಿಯಂತ್ರಿತ ಪ್ರವೇಶದಿಂದ ಸುರಕ್ಷತೆ ಸಾಧ್ಯ.
ಪಣಸೋಳಿ ಶಿಬಿರದಲ್ಲಿ ಕೆಳಗಿನ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಪ್ರವಾಸಿಗರಿಗೆ ಮರುಪ್ರವೇಶ ಅವಕಾಶ ಕಲ್ಪಿಸಬಹುದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ:
ಆನೆಗಳಿಂದ ಕನಿಷ್ಠ ಸುರಕ್ಷತಾ ಅಂತರ ಕಾಪಾಡುವುದು.
ಕಬ್ಬಿಣದ ಬೇಲಿ ಅಥವಾ ವೀಕ್ಷಣಾ ವೇದಿಕೆ ನಿರ್ಮಾಣ.
ಒಂದೇ ಬಾರಿ ಪ್ರವೇಶಿಸುವ. ಪ್ರವಾಸಿಗರ ಸಂಖ್ಯೆಗೆ ಮಿತಿ.
ಮಕ್ಕಳೊಂದಿಗೆ ಬರುವ ಕುಟುಂಬಗಳಿಗೆ ಪ್ರತ್ಯೇಕ ವೀಕ್ಷಣಾ ವಲಯ.
ಅನುಭವಿ ಮಾವುತರು ಮತ್ತು ಅರಣ್ಯ ಸಿಬ್ಬಂದಿಯ ಕಡ್ಡಾಯ ಹಾಜರಾತಿ .
ಆನೆಗಳ ಆರೋಗ್ಯ ಮತ್ತು ಮನೋಸ್ಥಿತಿ ಆಧರಿಸಿ ದಿನನಿತ್ಯ ವೀಕ್ಷಣೆಗೆ ಅನುಮತಿ.
ಶಬ್ದ, ಫ್ಲ್ಯಾಶ್ ಫೋಟೋಗ್ರಫಿ ಮತ್ತು ಆಹಾರ ಎಸೆಯುವಿಕೆಗೆ ನಿಷೇಧ.ಸಿ.ಸಿ.ಟಿ.ವಿ. ಹಾಗೂ ತುರ್ತು ಪ್ರತಿಕ್ರಿಯಾ ವ್ಯವಸ್ಥೆ ಅಳವಡಿಕೆಅಗತ್ಯ
ಪರಿಸರ ಶಿಕ್ಷಣದ ಕೇಂದ್ರವಾಗಬಹುದಾದ
ಪಣಸೋಲಿ ಶಿಬಿರ ಕೇವಲ ಮನರಂಜನಾ ತಾಣವಲ್ಲ. ಇದು ಪರಿಸರ ಶಿಕ್ಷಣದ ಜೀವಂತ ಕೇಂದ್ರವಾಗುವ ಸಾಮರ್ಥ್ಯ ಹೊಂದಿದೆ. ಆನೆಗಳ ಜೀವನಶೈಲಿ, ಅರಣ್ಯ ಸಂರಕ್ಷಣೆ,’ ಮಾನವ-ವನ್ಯಜೀವಿ ಸಹಬಾಳ್ವೆ ಮತ್ತು ಜೀವ ವೈವಿಧ್ಯದ ಕುರಿತು ಮಕ್ಕಳಿಗೆ ನೇರ ಅರಿವು ಮೂಡಿಸಲು ಇದು ಅತ್ಯುತ್ತಮ ವೇದಿಕೆಯಾಗಿದೆ.
ಪರಿಸರ ತಜ್ಞರ ಅಭಿಪ್ರಾಯದಲ್ಲಿ, “ವನ್ಯಜೀವಿಗಳನ್ನು ದೂರದಿಂದಲೇ ಉಳಿಸಬೇಕು” ಎಂಬ ಕಲ್ಪನೆಗಿಂತ “ಜವಾಬ್ದಾರಿಯುತ ವೀಕ್ಷಣೆ” ಹೆಚ್ಚು ಪರಿಣಾಮಕಾರಿ ಸಂರಕ್ಷಣಾ ಮನೋಭಾವ ಬೆಳೆಸುತ್ತದೆ. ಜನರಲ್ಲಿ ಪ್ರಕೃತಿಯ ಬಗ್ಗೆ ಆತ್ಮೀಯತೆ ಮೂಡಿದಾಗ ಮಾತ್ರ ಸಂರಕ್ಷಣೆಯ ಬದ್ಧತೆ ಹೆಚ್ಚುತ್ತದೆ.
ತಜ್ಞ ಸಮಿತಿ ರಚನೆಗೆ ಒತ್ತಾಯ
ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಅರಣ್ಯ ಇಲಾಖೆ, ವನ್ಯಜೀವಿ ತಜ್ಞರು, ಪಶುವೈದ್ಯರು, ಸ್ಥಳೀಯ ಆಡಳಿತ ಮತ್ತು ಪ್ರವಾಸೋದ್ಯಮ ಪ್ರತಿನಿಧಿಗಳನ್ನು ಒಳಗೊಂಡ ತಜ್ಞ ಸಮಿತಿ ರಚಿಸಿ, ಸುರಕ್ಷತಾ ಮಾರ್ಗಸೂಚಿ ರೂಪಿಸುವ ಅಗತ್ಯವಿದೆ ಎನ್ನಲಾಗುತ್ತಿದೆ.
ಸಂಪೂರ್ಣ ನಿರ್ಬಂಧಕ್ಕಿಂತ “ನಿಯಂತ್ರಿತ, ಜವಾಬ್ದಾರಿಯುತ ಮತ್ತು ತಂತ್ರಜ್ಞಾನಾಧಾರಿತ ವೀಕ್ಷಣಾ ವ್ಯವಸ್ಥೆ” ಜಾರಿಗೊಂಡರೆ ಪಣಸೋಲಿ ಶಿಬಿರ ಮತ್ತೆ ಪ್ರವಾಸಿಗರ ನೆಚ್ಚಿನ ತಾಣವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಪ್ರಕೃತಿ ಸಂರಕ್ಷಣೆ ಮತ್ತು ಜನಜೀವನ ಎರಡನ್ನೂ ಸಮತೋಲನದಲ್ಲಿ ಕಾಪಾಡುವ ನೀತಿಯೇ ಇಂದಿನ ಅಗತ್ಯವಾಗಿದೆ.ಎಂಬ ಅಭಿಪ್ರಾಯ ಕೇಳಿ ಬಂದಿದೆ.
