Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಪ್ರಸ್ತುತ ಸಮಾಜದಲ್ಲಿ ಸಾಂಸ್ಕೃತಿಕ ಪತನ ಕಂಡುಬರುತ್ತಿದೆ. ಅಧರ್ಮಯುಕ್ತ ವಿವಾಹಗಳು, ಮಿತಸಂತಾನ ಇವುಗಳಿಂದಾಗಿ ಧಾರ್ಮಿಕ ಪತನವನ್ನೂ ಕಾಣುತ್ತಿದ್ದೇವೆ. ಇವನ್ನು ಸರಿಪಡಿಸಲು ಯೋಜನಾಬದ್ಧ ಶ್ರಮ ಅಗತ್ಯ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು. 


ಅವರು ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ಮತ್ತು ಮಾರುತಿ ದೇವಸ್ಥಾನದ ವರ್ಧಂತಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

Banner Ad


ಧರ್ಮದಿಂದಲೇ ಉನ್ನತಿ ಪ್ರಾಪ್ತಿಯಾಗಬೇಕು. ಅಂತಹ ಉನ್ನತಿ ಪಡೆಯಲು ವೇದಾಧ್ಯಯನ ಅಗತ್ಯ. ಬ್ರಾಹ್ಮಣನಾದವ ವೇದವನ್ನು ಅಧ್ಯಯನ, ತಪಸ್ಸಿನ ಮೂಲಕ ಸಾಧಿಸಬೇಕು. ಆಗ ಮಾತ್ರ ಗೌರವ ಪ್ರಾಪ್ತಿಯಗುತ್ತದೆ ಎಂದರು.


ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ವೇದ ಶಿಕ್ಷಣದ ಕುರಿತು ಪಾಲಕರಿಗೆ ಶ್ರದ್ದೆ ಕಡಿಮೆಯಾಗಿದೆ. ಆ ಬಗ್ಗೆ ಆಸಕ್ತಿ ಬೆಳೆಸಬೇಕು. ಹವ್ಯಕರ ಜನಸಂಖ್ಯೆ
ಹೆಚ್ಚುವಂತೆ ಸಮಾಜ ಗಮನಹರಿಸಬೇಕು.ನಮ್ಮ ಮಕ್ಕಳಿಗೆ ಆಧುನಿಕ ಶಿಕ್ಷಣದ ಜೊತೆ ವೇದ ಶಿಕ್ಷಣವನ್ನೂ ನೀಡಬೇಕು. ವೇದ ಶಿಕ್ಷಣ ಪಡೆಯುವ ಆಸಕ್ತ ಮಕ್ಕಳು ಬಡವರಿದ್ದರೆ ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ಇಂಗ್ಲಿಷ್ ಶಿಕ್ಷಣವನ್ನೂ ನೀಡುತ್ತೇವೆ ಎಂದರು.


ನಿವೃತ್ತ ಕುಲಪತಿ ಡಾ. ಪರಮೇಶ್ವರ ಶಾಸ್ತ್ರಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಗುರುಕುಲದ ಮಹತ್ವದ ಕುರಿತು ಸಂಸ್ಕೃತ ವೇದದ ಅಧ್ಯಯನದಿಂದಾಗುವ ಚಿಂತನೆಗಳನ್ನು ಸುಂದರವಾಗಿ ಮಂಡಿಸಿದರು. ನಿವೃತ್ತ ಸಂಸ್ಕೃತ ಅಧ್ಯಾಪಕ ವಿ. ನಾರಾಯಣ ಭಟ್ಟ ಮೊಟ್ಟೆಪಾಲ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಶಾರದಾಂಬಾ ಪಾಠಶಾಲೆಯ ಮಾಜಿ ವಿದ್ಯಾರ್ಥಿ, ಶ್ರೀಮಠದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ನಾಗರಾಜ ಭಟ್ಟ ಗಂಗೆಮನೆ ಇವರನ್ನು ಶ್ರೀಗಳು ಪುರಸ್ಕರಿಸಿದರು.


ಶಾರದಾಂಬಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಮೇಶ ಭಾಗೃತ, ನಗರ ಸೀಮಾ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ನಗರ ಮಾತೃಮಂಡಳಿ ಅಧ್ಯಕ್ಷೆ ಆಶಾ ಬಗನಗದ್ದೆ ಉಪಸ್ಥಿತರಿದ್ದರು.ಅಧ್ಯಾಪಕ ಡಾ.ನರಸಿಂಹ ಭಟ್ಟ ನಿರ್ವಹಿಸಿದರು. ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಸ್ವಾಗತಿಸಿದರು. ಶ್ರೀಪಾದ ಭಟ್ಟ ಮತ್ತು ನರಸಿಂಹ ಭಟ್ಟ ಸನ್ಮಾನಪತ್ರ ವಾಚಿಸಿದರು.

Banner Ad