Banner Ad

ಸುದ್ದಿ ಕನ್ನಡ ವಾರ್ತೆ
ಹೊನ್ನಾವರ: ರಾಷ್ಟ್ರೀಯ ಹೆದ್ದಾರಿ 66ರ
ಕಾಸರಕೋಡಿನ ದುರ್ಗಂಬಾ ಹೋಟೆಲ್ ಎದುರು ಗುರುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಹೊನ್ನಾವರ ತಾಲೂಕಿನ ಕೆಳಗಿನ ಇಡಗುಂಜಿಯ ಅಂಗಡಿಮನೆ ನಿವಾಸಿ ಕಿರಣ ಬಾಲಚಂದ್ರ ನಾಯ್ಕ (24) ಎಂದು ಗುರುತಿಸಲಾಗಿದೆ. ಇವರು ಕೂಲಿ ಕೆಲಸ ಮಾಡಿಕೊಂಡಿದ್ದರು.ಕಿರಣ ಅವರು ಗುರುವಾರ ಬೆಳಗಿನ ಜಾವ ತಮ್ಮ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದಾಗ, ಹೊನ್ನಾವರ ಕಡೆಯಿಂದ ಮಂಕಿ ಕಡೆಗೆ ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಿರಣ ಅವರ ತಲೆ, ಮುಖ ಹಾಗೂ ಕೈಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

Banner Ad

ಅಪಘಾತ ಎಸಗಿದ ವಾಹನ ಚಾಲಕನು ಅಪಘಾತದ ನಂತರ ವಾಹನವನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತು ಮೃತರ ಸಂಬಂಧಿ, ಗುಣವಂತೆಯ ನಿವಾಸಿ ರವೀಂದ್ರ ಮಾಧವ ನಾಯ್ಕಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಅಪರಿಚಿತ ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತಪಟ್ಟ ಯುವಕ ಕಾಂಗ್ರೆಸ್ ಪಕ್ಷದ ಜಿಲ್ಲಾ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಬಾಲಚಂದ್ರ ನಾಯ್ಕ ಇವರ ಪುತ್ರ ಎಂದು ತಿಳಿದು ಬಂದಿದೆ.

Banner Ad