ಸುದ್ದಿ ಕನ್ನಡ ವಾರ್ತೆ
ಹಳಿಯಾಳ: ಕೈದಿಯೊಬ್ಬನಿಗೆ ಸರ್ಕಾರದಿಂದ ಬಂದ ಹಣ ನೀಡಲು 60 ಸಾವಿರ ಡಿಮ್ಯಾಂಡ್ ಇಟ್ಟಿದ್ದ ಹಳಿಯಾಳ ಸಬ್ ಜೈಲಿನ ಜೈಲರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಹಳಿಯಾಳ ಸಬ್ ಜೈಲಿನ ಜೈಲರ್ ಕಲ್ಲಪ್ಪ ಗಸ್ತಿ ಎಂಬಾತ ಎರಡು ವರ್ಷ ಜೈಲಿನಲ್ಲಿದ್ದ ರಾಜ್ ಕುಮಾರ್ ಎಂಬಾತನಿಂದ 60 ಸಾವಿರ ರೂಪಾಯಿ ಡಿಮ್ಯಾಂಡ್ ಮಾಡಿದ್ದನು. ಜೈಲಿನಲ್ಲಿ ಕೆಲಸ ಮಾಡಿದ್ದ ರಾಜ್ ಕುಮಾರ್ ಗೆ ಸರ್ಕಾರದಿಂದ 1.34 ಲಕ್ಷ ಹಣ ಹಾಗೂ 45 ಸಾವಿರ ಹಣ ಎರಡು ಕಂತಿನಲ್ಲಿ ಬಿಡುಗಡೆಯಾಗಿದ್ದು ಈ ಹಣ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಮುಂಗಡವಾಗಿ ಹತ್ತು
ಸಾವಿರ ಹಣ ಬೇರೆಯೊಬ್ಬರ ಹೆಸರಿನಲ್ಲಿ ಫೋನ್ ಪೇಗೆ ಹಾಕಿಸಿಕೊಂಡಿದ್ದು ನಂತರ ಅಲರ್ಟ್ ಆಗಿ ಉಳಿದ ಹಣ ಪಡೆಯಲು ಬೇರೆ ಬೇರೆ ಕಡೆ ಬರುವಂತೆ ಜೈಲರ್ ದೂರುದಾರ ರಾಜುಗೆ ತಿಳಿಸಿದ್ದನು.
ಕಾರವಾರ ಲೋಕಾಯುಕ್ತ ಡಿ.ಎಸ್ ಪಿ ಧನ್ಯಾನಾಯಕ ಹಾಗೂ ಇನ್ಸಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ಗುರುವಾರ ದಾಳಿ ನಡೆಸಿ ಕಲ್ಲಪ್ಪ ಗಸ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಕಲ್ಲಪ್ಪ ಗಸ್ತಿ ಫೋನ್ ಪೇ ಮೂಲಕ ಹಣ ಪಡೆದಿರುವುದು ಖಚಿತವಾದ ಹಿನ್ನಲೆಯಲ್ಲಿ ತಕ್ಷಣ ಆತನನ್ನ ಬೆಳಗಾವಿ ಜೈಲಿಗೆ ವರ್ಗಾವಣೆ ಮಾಡಲಾಗಿದ್ದು ಇಲಾಖೆ ಅಮಾನತು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
