Banner Ad

ಸುದ್ದಿ ಕನ್ನಡ ವಾರ್ತೆ
ಶಿರಸಿ:ತಾಲೂಕಿನ ಮಲಳಿಯ ಮಂಜುನಾಥ ರಾಮಾ ಗೌಡ ಕೊಲೆ ಆರೋಪಿತನಾದ ವೆಂಕಟ್ರಮಣ ಗಣಪ ಗೌಡ ಈತನಿಗೆ ಇವರ ಮೇಲಿನ ಆಪಾದನೆಯು ರುಜುವಾತಾಗಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ರೂ.10,000 ದಂಡ, ಮೃತನ ಹೆಂಡತಿಗೆ ರೂ.50,000 ಪರಿಹಾರ ನೀಡುವಂತೆ ಮತ್ತು ಹೆಚ್ಚಿನ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪಡೆಯಬಹುದೆಂದು ಶಿರಸಿಯ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠಾಸೀನ ನ್ಯಾಯಾಧೀಶರಾದ ಕಿರಣ ಕಿಣಿ ತೀರ್ಪು ನೀಡಿದ್ದಾರೆ.

ಶಿರಸಿ ತಾಲೂಕಿನ ಮಳಲಿಯ ವೆಂಕಟರಮಣ ಗಣಪ ಗೌಡ, ತನ್ನ ಮನೆ ಅಳಿಯ ಮೃತ ಮಂಜುನಾಥರಾಮ ಗೌಡನನ್ನು ಮನೆಯಿಂದ ಓಡಿಸಬೇಕು ಎನ್ನುವ ಉದ್ದೇಶದಿಂದ ಹಾಗೂ ತನಗೆ ಸರಾಯಿ ಕುಡಿಯಲು ಹಣ ಕೊಡುವುದಿಲ್ಲವೆಂದು ಜಗಳ ಮಾಡಿ, ದ್ವೇಷದಿಂದ ಇದ್ದವನು ದಿ.02-05-2024 ರಂದು ಮನೆಯ ಜನರು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಯಾರು ಇಲ್ಲದ ಸಮಯ ನೋಡಿ ತಲೆಗೆ ಕಟ್ಟಿಗೆಯ ಬಡಿಗೆಯಿಂದ ಬಲವಾಗಿ ಹೊಡೆದ ಪರಿಣಾಮ ಸ್ಥಳದಲ್ಲೇ ಮರಣ ಹೊಂದುವಂತೆ ಮಾಡಿ ಕೊಲೆ ಎಸಗಿರುತ್ತಾನೆ ಎಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿ ವಿಚಾರಣೆ ನಡೆಸಲಾಗಿತ್ತು.

Banner Ad

ಶಿರಸಿ ಗ್ರಾಮೀಣ ಪೊಲೀಸ್‌ ಠಾಣೆಯ ಪೊಲೀಸ್ ನಿರೀಕ್ಷಕ ಸೀತಾರಾಮ್ ಪಿ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು ಹಾಗೂ ಹೆಡ್ ಕಾನ್ಸ್‌ಟೇಬಲ್ ಮಹೇಶ ನಾಯ್ಕ ಹಾಗೂ ಕಾನ್ಸ್‌ಟೇಬಲ್ ಶಂಕರಾಚಾರಿ ಎನ್ ಇವರು ಸಾಕ್ಷಿ ವಿಚಾರಣೆಯ ಕಾಲಕ್ಕೆ ಸಾಕ್ಷಿದಾರರನ್ನು ಸಮಯೋಜಿತವಾಗಿ ಪ್ರಕರಣದಲ್ಲಿ ಹಾಜರುಪಡಿಸಿ ಆರೋಪಿತರನ್ನು ಶಿಕ್ಷೆಗೆ ಗುರಿಪಡಿಸುವಲ್ಲಿ ಸಹಕರಿಸಿದ್ದರು.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ರಾಜೇಶ್ ಎಂ. ಮಳಗಿಕ‌ರ್ ಪ್ರಕರಣದ ವಿದ್ಯಮಾನಗಳನ್ನು ಮತ್ತು ಸಾಕ್ಷಿದಾರರ ಸಾಕ್ಷ್ಯವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿತನಿಗೆ ಶಿಕ್ಷೆ ವಿಧಿಸಬೇಕೆಂದು ಸುದೀರ್ಘ ವಾದ ಮಂಡಿಸಿದ್ದರು.

Banner Ad